×
Ad

ವಿದ್ಯಾರ್ಥಿನಿ ಶಿಕ್ಷಣಕ್ಕಾಗಿ ರೈಲು ಮುಂದುವರಿಸಿದ ಜಪಾನ್ ದೇಶದಿಂದ ಸರಕಾರ ಕಲಿಯಬೇಕು: ಹೈಕೋರ್ಟ್ ಅಸಮಾಧಾನ

Update: 2023-04-14 21:02 IST

ಬೆಂಗಳೂರು, ಎ.14: ನೂತನವಾಗಿ ಸರಕಾರಿ ಪ್ರಾರ್ಥಮಿಕ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಮಕ್ಕಳ ಶಿಕ್ಷಣದ ಕುರಿತು ಜಪಾನ್ ದೇಶದಿಂದ ರಾಜ್ಯ ಸರಕಾರ ಕಲಿತುಕೊಳ್ಳಬೇಕಿದೆ ಎಂದು ತಿಳಿಸಿದೆ.

ಬೆಂಗಳೂರು-ಮೈಸೂರು ರಸ್ತೆ ಅಗಲೀಕರಣಕ್ಕಾಗಿ ಶಾಲೆಯ ಕಟ್ಟಡ ಮತ್ತು ಜಮೀನನ್ನು ಬಿಟ್ಟುಕೊಟ್ಟು ಪರಿಹಾರವನ್ನು ಪಡೆದಿದ್ದರೂ, ನೂತನವಾಗಿ ಶಾಲೆ ನಿರ್ಮಿಸಲು ಸ್ಥಳಾವಕಾಶ ಒದಗಿಸದೇ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅಗರಲಿಂಗನ ದೊಡ್ಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ(ಎಸ್‍ಡಿಎಂಸಿ) ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಜಪಾನ್ ದೇಶದ ಕ್ರಮ ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಜಪಾನ್ ದೇಶದ ಹೊಕ್ಕೈಡೋ ಎಂಬ ದ್ವೀಪದ ಹಳ್ಳಿಯೊಂದರಲ್ಲಿ ರೈಲು ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಅಲ್ಲಿನ ಸರಕಾರ ಮುಂದಾಗಿತ್ತು. ಆದರೆ, ವಿದ್ಯಾರ್ಥಿನಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಅರಿತು ಆ ಒಂದೇ ವಿದ್ಯಾರ್ಥಿನಿ ಪ್ರೌಢ ಶಿಕ್ಷಣದಿಂದ ಪದವಿಯವರೆಗೂ ಶಿಕ್ಷಣ ಮುಂದುವರೆಸಲು ರೈಲ್ವೆ ನಿಲ್ದಾಣ ಮತ್ತು ರೈಲು ಸಂಚಾರ ಮುಂದುವರೆಸಿತ್ತು.

ಈ ಅಂಶ ಬಹಿರಂಗವಾಗುತ್ತಿದ್ದಂತೆ ಜಪಾನ್ ದೇಶದ ಸರಕಾರಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ನಮ್ಮ ಸರಕಾರಿ ಅಧಿಕಾರಿಗಳು, ಶಾಲೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದೆ ಮಕ್ಕಳ ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 

ಮುಂದಿನ ಸೆಪ್ಟಂಬರ್ ಅಂತ್ಯದ ವೇಳೆ ಶಾಲೆಗೆ ಅಗತ್ಯವಿರುವ ಭೂಮಿ ಮತ್ತು ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಈ ಸಂಬಂಧದ ಆದೇಶದ ಅನುಷ್ಠಾನದ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

Similar News