ವಿನಯ್ ಕುಲಕರ್ಣಿ ಧಾರವಾಡ ಪ್ರವೇಶ: ಅರ್ಜಿ ವಿಚಾರಣೆ ಎ.18ಕ್ಕೆ ಮುಂದೂಡಿದ ಕೋರ್ಟ್

Update: 2023-04-14 16:29 GMT

ಧಾರವಾಡ, ಎ.14: ಧಾರವಾಡ ಜಿಪಂ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ತಮಗೆ ಧಾರವಾಡ ಪ್ರವೇಶ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯ ತೀರ್ಪುನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಪ್ರಿಲ್​ 18ಕ್ಕೆ ಮುಂದೂಡಿದೆ.

ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ವಿಚಾರಣೆ ನಡೆಸಿತು.

ಸಿಬಿಐ ವಿಶೇಷ ಅಭಿಯೋಜಕ ಗಂಗಾಧರ ಶೆಟ್ಟಿ ಮಂಡಿಸಿದ ವಾದಕ್ಕೆ ಪ್ರತಿಯಾಗಿ, ಆರೋಪಿ ಪರ ವಕೀಲರಾದ ಸಿ.ಎಚ್.ಹನುಮಂತರಾಯಪ್ಪ ಅವರು, ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು. ತಮ್ಮ ಕಕ್ಷಿದಾರರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬ ಅನುಮಾನವಿದ್ದರೆ, ಎಲ್ಲ ಸಾಕ್ಷಿಗಳಿಗೆ ಭದ್ರತೆ ನೀಡಬಹುದು. ಸಿಬಿಐನಿಂದ ಸಾಧ್ಯವಾಗದಿದ್ದರೆ ಸ್ಥಳೀಯ ಪೊಲೀಸರಿಂದ ಭದ್ರತೆ ನೀಡಬಹುದು. ತಮ್ಮ ಕಕ್ಷಿದಾರ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಬೇಕಿದೆ ಎಂದು ಕೋರ್ಟ್‍ಗೆ ಮನವಿ ಮಾಡಿದ್ದಾರೆ.

ಇದಕ್ಕೆ ಆಕ್ಷೇಪಿಸಿದ ಸಿಬಿಐ ವಿಶೇಷ ಅಭಿಯೋಜಕ ಗಂಗಾಧರ ಶೆಟ್ಟಿ, ಸಿಬಿಐನಿಂದ ಎಲ್ಲ 90 ಸಾಕ್ಷಿಗಳಿಗೆ ಭದ್ರತೆ ನೀಡಲು ಸಾಧ್ಯವಿಲ್ಲ. ಇನ್ನು ಸ್ಥಳೀಯ ಪೊಲೀಸರೇ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಹಣ ಪಡೆದು ಸಾಕ್ಷಿ ಮುಚ್ಚಿಡಲು ಯತ್ನಿಸಿದ್ದಾರೆ ಎಂಬುದು ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಆರೋಪಿ ನೇರವಾಗಿ ಧಾರವಾಡಕ್ಕೆ ತೆರಳಿ ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಆದರೆ, ಸೂಚಕರ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶವಿದೆ ಎಂದು ವಾದ ಮಂಡಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆ ಪೂರ್ಣಗೊಳಿಸಿ, ಎ.18 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ವಿಚಾರಣೆ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಕೂಡ ಹಾಜರಾಗಿದ್ದರು.

Similar News