ನಿನ್ನನ್ನೇ ನಂಬಿದ್ದೇನೆ, ದಯವಿಟ್ಟು ಕೈಬಿಡಬೇಡ: ಬಿಎಸ್ ವೈ ಅಪ್ತ ಸಿದ್ಧಲಿಂಗಸ್ವಾಮಿ ಭೇಟಿ ಮಾಡಿ ಮನವಿ ಮಾಡಿದ ಸೋಮಣ್ಣ
ಮೈಸೂರು,ಎ.14: ನಿನ್ನನ್ನೇ ನಂಬಿದ್ದೇನೆ, ದಯವಿಟ್ಟು ಕೈಬಿಡಬೇಡ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿದ್ದಲಿಂಗಸ್ವಾಮಿ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ್ದ ವಿ.ಸೋಮಣ್ಣ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಚುನಾವಣೆಯಲ್ಲಿ ಬೆಂಬಲ ಕೊಡುವಂತೆ ಕೋರಿಕೊಂಡರು. ಅಲ್ಲೇ ಉಪಹಾರ ಸೇವಿಸಿದರು.
ನಿನ್ನ ಬಗ್ಗೆ ನಾನು ಏನನ್ನೂ ಅಂದುಕೊಂಡಿಲ್ಲ. ನನ್ನನ್ನು ಬೆಂಬಲಿಸು. ನೀನೇ ನನ್ನ ಸೈನ್ಯದ ಕಮಾಂಡರ್ ಆಗಿ ಕೆಲಸ ಮಾಡು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾ.ಪು.ಸಿದ್ಧಲಿಂಗಸ್ವಾಮಿ, ನಮ್ಮ ಮನೆಯಿಂದಲೇ ಪ್ರಚಾರ ಕಾರ್ಯ ಪ್ರಾರಂಭಿಸಬೇಕು ಎಂದು ವಿಶೇಷ ಪೂಜೆ ಇಟ್ಟುಕೊಂಡಿದ್ದೇನೆ. ಬೆಳಿಗ್ಗೆಯಿಂದಲೇ ನಿಮ್ಮ ಹೆಸರಲ್ಲಿ ಪೂಜೆ ನಡೆಸಿರುವೆ. ನಿಮ್ಮ ರಾಶಿ ನಕ್ಷತ್ರ ಹೇಳಿ ಪೂಜೆ ಮಾಡಿಸಿದ್ದೇನೆ. ಈ ಬಾರಿ ನೀವು ಗೆಲ್ಲುತ್ತೀರಿ ಎಂದರು. ಸೋಮಣ್ಣ ಅವರಿಂದಲೂ ಪೂಜೆ ಮಾಡಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿ.ಸೋಮಣ್ಣ, ಸಿದ್ದಲಿಂಗಸ್ವಾಮಿ ನನ್ನ ಸಹೋದರ ಇದ್ದಂತೆ. ಯಾವುದೋ ಜನ್ಮದಲ್ಲಿ ಅಣ್ಣನೋ, ತಮ್ಮನೋ ಆಗಿದ್ದ ಎನಿಸುವಂತಹ ಬಾಂಧವ್ಯವಿದೆ. ಅವರಿಗೆ ವರುಣ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕೆಲವು ಜವಾಬ್ದಾರಿಗಳನ್ನು ನೀಡಿದ್ದೇನೆ. ವರುಣದಲ್ಲಿ ಪ್ರಚಾರಕ್ಕೆ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮೊದಲಾದವರು ಬರಲಿದ್ದಾರೆ ಎಂದು ತಿಳಿಸಿದರು.
ಪ್ರಚಾರದಲ್ಲಿ ತೊಡಗುವೆ. ವಾರದ ಬಳಿಕ ಕ್ಷೇತ್ರದ ವಾತಾವರಣ ತಿಳಿಯುತ್ತದೆ. ಅಭಿವೃದ್ಧಿಯ ವಿಷಯದಲ್ಲಿ ವರುಣವನ್ನು ಮತ್ತೊಂದು ಗೋವಿಂದರಾಜ ನಗರ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಕಾಪು ಸಿದ್ದಲಿಂಗಸ್ವಾಮಿ ನಿವಾಸಕ್ಕೆ ಅವರು ಬರುತ್ತಿದ್ದಂತೆ ಅಭಿಮಾನಿಗಳಿಂದ, ಮುಂದಿನ ಮುಖ್ಯಮಂತ್ರಿ ವಿ.ಸೋಮಣ್ಣ ಎಂಬ ಘೋಷಣೆ ಮೊಳಗಿತು.