'ನಂದಿನಿ' ಉಳಿವಿಗೆ ರೈತರು, ರಾಸುಗಳು ಉಳಿಯಬೇಕು

Update: 2023-04-14 18:41 GMT

ಜೀವವಿರೋಧಕಗಳ ಅತಿ ಬಳಕೆ, ಸ್ಥಳೀಯ ತಳಿಗಳನ್ನು ಬಿಟ್ಟು ವಿದೇಶಿ ತಳಿಗಳಿಗೆ ಆದ್ಯತೆ ನೀಡಿರುವುದರಿಂದ ವಂಶವಾಹಿ ವೈವಿಧ್ಯತೆ ಇಲ್ಲದೆ ಇರುವುದು, ಮೇವು-ಹಿಂಡಿ ಇತ್ಯಾದಿ ತುಟ್ಟಿಯಾಗಿರುವುದು, ಹವಾಮಾನ ಬದಲಾವಣೆಯ ವ್ಯತ್ಯಯಗಳು, ಹೈನೋದ್ಯಮಕ್ಕೆ ಅಗತ್ಯ ಬೆಂಬಲ ಇಲ್ಲದೆ ಇರುವುದು-ಇವೆಲ್ಲವೂ ಹೈನುಗಾರರನ್ನು ಹೈರಾಣಾಗಿಸಿವೆ. ಜಾನುವಾರು ರೋಗಗಳು ದಿನೇದಿನೇ ಹೆಚ್ಚುತ್ತಿದ್ದು, ಇದರಿಂದ ತೀವ್ರ ಆರ್ಥಿಕ ನಷ್ಟ ಮತ್ತು ಆಹಾರ ಸುರಕ್ಷೆಗೆ ಧಕ್ಕೆಯಲ್ಲದೆ, ಮನುಷ್ಯರ ಆರೋಗ್ಯಕ್ಕೂ ಹಾನಿಯುಂಟಾಗುತ್ತಿದೆ.



'ನಂದಿನಿ' ಉಳಿಯಬೇಕು; ಹೈನುಗಾರರು ಉಳಿಯಬೇಕು; ಒಕ್ಕಲು ಮಕ್ಕಳ ಕೈಯಲ್ಲಿ ಫಲವತ್ತು ಭೂಮಿ ಉಳಿಯಬೇಕು ಮತ್ತು ಇದೆಲ್ಲವೂ ಆಗಬೇಕೆಂದರೆ, 'ಪುಣ್ಯಕೋಟಿ'ಗಳು ಉಳಿಯಬೇಕು. ಆದರೆ, ದೇಶ-ರಾಜ್ಯದಲ್ಲಿ ಸಾಕುಪ್ರಾಣಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಜೀವವಿರೋಧಕಗಳ ಅತಿ ಬಳಕೆ, ಸ್ಥಳೀಯ ತಳಿಗಳನ್ನು ಬಿಟ್ಟು ವಿದೇಶಿ ತಳಿಗಳಿಗೆ ಆದ್ಯತೆ ನೀಡಿರುವುದರಿಂದ ವಂಶವಾಹಿ ವೈವಿಧ್ಯತೆ ಇಲ್ಲದೆ ಇರುವುದು, ಮೇವು-ಹಿಂಡಿ ಇತ್ಯಾದಿ ತುಟ್ಟಿಯಾಗಿರುವುದು, ಹವಾಮಾನ ಬದಲಾವಣೆಯ ವ್ಯತ್ಯಯಗಳು, ಹೈನೋದ್ಯಮಕ್ಕೆ ಅಗತ್ಯ ಬೆಂಬಲ ಇಲ್ಲದೆ ಇರುವುದು-ಇವೆಲ್ಲವೂ ಹೈನುಗಾರರನ್ನು ಹೈರಾಣಾಗಿಸಿವೆ. ಜಾನುವಾರು ರೋಗಗಳು ದಿನೇದಿನೇ ಹೆಚ್ಚುತ್ತಿದ್ದು, ಇದರಿಂದ ತೀವ್ರ ಆರ್ಥಿಕ ನಷ್ಟ ಮತ್ತು ಆಹಾರ ಸುರಕ್ಷೆಗೆ ಧಕ್ಕೆಯಲ್ಲದೆ, ಮನುಷ್ಯರ ಆರೋಗ್ಯಕ್ಕೂ ಹಾನಿಯುಂಟಾಗುತ್ತಿದೆ.

ಸಾಕುಪ್ರಾಣಿಯ ವ್ಯಾಖ್ಯಾನ:
ದನ, ಎತ್ತು, ಕುರಿ, ಮೇಕೆ, ಕುದುರೆ, ಕೋಳಿ, ಹಂದಿ ಮತ್ತು ಯಾಕ್ ಸಾಕುಪ್ರಾಣಿಗಳ ಗುಂಪಿಗೆ ಸೇರುತ್ತವೆ. 2019ರ ಪಶುಗಣತಿ ಪ್ರಕಾರ, ದೇಶದಲ್ಲಿ 536.76 ದಶಲಕ್ಷ ಸಾಕುಪ್ರಾಣಿಗಳಿವೆ. ಇದರಲ್ಲಿ ಗೋವುಗಳ ಪ್ರಮಾಣ 303.76 ದಶಲಕ್ಷ(ಹಸು, ಎಮ್ಮೆ, ಮಿಥುನ್ ಮತ್ತು ಯಾಕ್). ಈ ಸಾಕುಪ್ರಾಣಿಗಳು 2 ಹೆಕ್ಟೇರ್(5 ಎಕರೆ)ಗಿಂತ ಕಡಿಮೆ ಜಮೀನು ಇರುವ ಸಣ್ಣ/ಅಂಚಿನ ರೈತರ ಜೀವನಾಧಾರವಾಗಿವೆ. ಒಣ ಮತ್ತು ಅರೆಶುಷ್ಕ ಪ್ರದೇಶಗಳಲ್ಲಿ ಈ ಸಾಕುಪ್ರಾಣಿಗಳು ರೈತರಿಗೆ ವಿಮೆಯಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ, ರಾಸುಗಳ ಸಂಖ್ಯೆ ಹೆಚ್ಚು ಇದ್ದರೂ, ಉತ್ಪಾದಕತೆ ಕಡಿಮೆಯಿದೆ. ರಾಸುಗಳು ಹಲವು ರೋಗಗಳಿಗೆ ಈಡಾಗುವುದು ಇದಕ್ಕೆ ಪ್ರಮುಖ ಕಾರಣ. ಮೇಲೆ ಉಲ್ಲೇಖಿಸಿದ ಪಶುಗಣತಿ ಪ್ರಕಾರ, ರಾಜ್ಯದಲ್ಲಿ 84 ದಶಲಕ್ಷ ಹಸುಗಳು, 29 ಲಕ್ಷ ಎಮ್ಮೆ, 61 ಲಕ್ಷ ಮೇಕೆ, 1.1 ಕೋಟಿ ಕುರಿ, 3.3 ಲಕ್ಷ ಹಂದಿ ಹಾಗೂ 5.95 ಕೋಟಿ ಕೋಳಿಗಳಿವೆ. ಹಾಲು, ಮೊಸರು, ತುಪ್ಪ, ಸಂಸ್ಕರಿಸಿದ ಉತ್ಪನ್ನಗಳು ಮಾತ್ರವಲ್ಲದೆ, ಮಾಂಸೋತ್ಪನ್ನಗಳು, ಚರ್ಮ ಇತ್ಯಾದಿ ಒಳಗೊಂಡ ಪಶು ಉದ್ಯಮ ಆರ್ಥಿಕವಾಗಿ ಅತ್ಯಂತ ಮುಖ್ಯವಾದುದು. 2020ರ ಎಫ್‌ಎಒ ವರದಿ ಪ್ರಕಾರ, ಏಶ್ಯದಿಂದ 2017ರಲ್ಲಿ ರಫ್ತಾದ ಜೀವಂತ ರಾಸು, ಎತ್ತುಗಳ ಮಾಂಸ ಮತ್ತು ಮಾಂಸೋತ್ಪನ್ನಗಳ ಮೌಲ್ಯ 5.5 ಶತಕೋಟಿ ಡಾಲರ್.

ರಾಸುಗಳನ್ನು ಕಾಡಿದ ಎರಡು ರೋಗಗಳು: 
ದೇಶ ಕೊರೋನ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದ ಹೊತ್ತಲ್ಲೇ ಗಂಟು ಚರ್ಮ ರೋಗ(ಎಲ್‌ಎಸ್‌ಡಿ) ಮತ್ತು ಆನಂತರ ಆಫ್ರಿಕಾದ ಹಂದಿ ಜ್ವರ ಜಾನುವಾರುಗಳನ್ನು ತೀವ್ರವಾಗಿ ಕಾಡಿದವು. ಆಗಸ್ಟ್ 2019ರಲ್ಲಿ ಒಡಿಶಾದಲ್ಲಿ ಗಂಟು ಚರ್ಮ ರೋಗದ ಮೊದಲ ಹಾಗೂ ಜನವರಿ 2020ರಲ್ಲಿ ಅಸ್ಸಾಮಿನಲ್ಲಿ ಆಫ್ರಿಕಾದ ಹಂದಿ ಜ್ವರದ ಮೊದಲ ಪ್ರಕರಣ ವರದಿಯಾಯಿತು. ಗಂಟು ಚರ್ಮ ರೋಗಕ್ಕೆ ಯಾವುದೇ ಔಷಧವಿಲ್ಲ. ಆರೋಗ್ಯವಂತ ಪ್ರಾಣಿಗಳು ಸುಧಾರಿಸಿಕೊಳ್ಳುತ್ತವೆ. ರೋಗಕ್ಕೆ ಕಾರಣವಾದ ಪಾಕ್ಸ್ ವೈರಸ್(ಕುರಿ/ಮೇಕೆಗಳ ದದ್ದು ವೈರಸ್ ಗುಂಪಿಗೆ ಸೇರಿದೆ) ಸೊಳ್ಳೆ, ನೊಣ, ಚಿಗಟ, ಜೊಲ್ಲು, ಮಲಿನ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ. ತಲೆ, ಕುತ್ತಿಗೆ, ಕೆಚ್ಚಲು ಹಾಗೂ ಜನನಾಂಗದ ಸುತ್ತ ಗಂಟುಗಳು ಎದ್ದು, ಬಳಿಕ ಒಡೆದು ಗಾಯ ಆಗುತ್ತದೆ. ರೋಗ ಅತಿ ಶೀಘ್ರವಾಗಿ ಹರಡಿ, ದೀರ್ಘಕಾಲೀನ ಅನಾರೋಗ್ಯಕ್ಕೆ ಮತ್ತು ಅಪಾರ ಸಾವು ನೋವಿಗೆ ಕಾರಣವಾಗುತ್ತದೆ. ಒಡಿಶಾದಲ್ಲಿ ಆಗಸ್ಟ್ 2019ರಲ್ಲಿ ಕಾಣಿಸಿಕೊಂಡ ಎಲ್‌ಎಸ್‌ಡಿ, ಸೆಪ್ಟಂಬರ್ 2022ರ ಹೊತ್ತಿಗೆ ಕರ್ನಾಟಕ ಸೇರಿದಂತೆ 16 ರಾಜ್ಯಗಳ 251 ಜಿಲ್ಲೆಗಳಲ್ಲಿ ಹರಡಿತು. 20 ಲಕ್ಷ ಹಸುಗಳಿಗೆ ಸೋಂಕು ತಗಲಿ, 10 ಲಕ್ಷ ರಾಸುಗಳು ಮೃತಪಟ್ಟವು(ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮಂತ್ರಾಲಯದ ಮಾಹಿತಿ). ದೇಶದ ರಾಸುಗಳನ್ನು ಕಾಡುತ್ತಿರುವ ಮೂರು ಪ್ರಮುಖ ಕಾಯಿಲೆಗಳಾದ ಕಾಲು ಬಾಯಿ ರೋಗ(ಎಫ್‌ಎಂಡಿ), ಹೆಮೊರೇಜಿಕ್ ಸೆಪ್ಟಿಸೇಮಿಯಾ ಮತ್ತು ಆಂಥಾಕ್ಸ್‌ನಿಂದ ಸಂಭವಿಸುವ ಸಾವಿನ 20 ಪಟ್ಟು ಅಧಿಕ ಸಾವಿಗೆ ಎಲ್‌ಎಸ್‌ಡಿ ಕಾರಣವಾಯಿತು. ದೇಶದ 2ನೇ ಅತಿ ಹೆಚ್ಚು ಸಾಕುಪ್ರಾಣಿಗಳು ಹಾಗೂ ಆರನೇ ಅಧಿಕ ಸಂಖ್ಯೆಯ ಹಸುಗಳಿರುವ ರಾಜಸ್ಥಾನದಲ್ಲಿ ಅಧಿಕ ಸಾವು ಸಂಭವಿಸಿತು. ಸೋಂಕಿಗೀಡಾದ 20 ಲಕ್ಷ ರಾಸುಗಳಲ್ಲಿ 14 ಲಕ್ಷ ರಾಜಸ್ಥಾನಕ್ಕೆ ಸೇರಿದ್ದವು.

ಎಲ್‌ಎಸ್‌ಡಿಗೆ ಪರಿಹಾರವೆಂದು ಮೇಕೆ ದದ್ದು ಲಸಿಕೆ ಬಳಸಲಾಗುತ್ತದೆ. ಐಸಿಎಆರ್ ಆಗಸ್ಟ್ 2022ರಲ್ಲಿ ದೇಸಿ ಲಸಿಕೆಯನ್ನು ಘೋಷಿಸಿದರೂ, ವಾಣಿಜ್ಯಿಕ ಉತ್ಪಾದನೆ ಆರಂಭಗೊಳ್ಳಲಿಲ್ಲ. ಸಮಸ್ಯೆ ಏನೆಂದರೆ, ಎಲ್‌ಎಸ್‌ಡಿ ವೈರಸ್ ವೇಗವಾಗಿ ಮಾರ್ಪಡುತ್ತದೆ. ಅದರ ಜೀನೋಮ್ ಬಹಳ ದೊಡ್ಡದು. ಕೊರೋನ ವೈರಸ್ 30,000 ನ್ಯೂಕ್ಲಿಯೋಟೈಡ್‌ಗಳನ್ನು ಹೊಂದಿದ್ದರೆ, ಎಲ್‌ಎಸ್‌ಡಿ ವೈರಸ್ 1.51 ಲಕ್ಷ ನ್ಯೂಕ್ಲಿಯೋಟೈಡ್‌ಗಳನ್ನು ಹೊಂದಿದೆ. ಪ್ರತೀ ಬಾರಿ ಜೀವಕೋಶಗಳು ಮಾರ್ಪಾಡಾದಾಗ, ಬೇರೆಯದೇ ತಳಿ ಸೃಷ್ಟಿಯಾಗುತ್ತದೆ. ಆದ್ದರಿಂದ, ಎಲ್‌ಎಸ್‌ಡಿಗೆ ಲಸಿಕೆ ಕಂಡುಹಿಡಿಯುವುದು ಕ್ಲಿಷ್ಟ ಕೆಲಸ. 2017ರ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್‌ಎಒ) ವರದಿ ಪ್ರಕಾರ, ಎಲ್‌ಎಸ್‌ಡಿ ಹೆಚ್ಚು ಹಾಲು ನೀಡುವ ರಾಸುಗಳಿಗೆ ಅಧಿಕ ಹಾನಿಕರ. ಹಸುಗಳು ಬಾಯಿ ಹುಣ್ಣಿನಿಂದಾಗಿ ಆರು ತಿಂಗಳು ಕಾಲ ಮೇವು ತಿನ್ನಲು ಆಗದೆ, ಹಾಲಿನ ಉತ್ಪಾದನೆ ಕುಸಿಯುತ್ತದೆ. ಜತೆಗೆ, ಕಾಯಿಲೆಯಿಂದ ಚರ್ಮದ ಮೇಲೆ ಗುರುತು ಉಳಿಯುವುದರಿಂದ, ರಾಸುಗಳ ಹಾಗೂ ಚರ್ಮದ ಬೆಲೆ ಕಡಿಮೆಯಾಗುತ್ತದೆ. ಐಸಿಎಆರ್‌ನ ಅಧ್ಯಯನದ ಪ್ರಕಾರ, 4 ಪ್ರಮುಖ ಪಶು ರೋಗಗಳಿಂದ ಆಗುತ್ತಿರುವ ವಾರ್ಷಿಕ ನಷ್ಟ 56,000 ಕೋಟಿ ರೂ. ಹಾಲಿನ ಉತ್ಪಾದನೆ ಕುಸಿತ, ರಾಸುಗಳ ಸಾವು, ಗರ್ಭ ಧರಿಸುವಲ್ಲಿ ವಿಳಂಬ, ತೂಕದ ಕುಸಿತ, ಗಬ್ಬದ ಹಸುಗಳಲ್ಲಿ ಗರ್ಭಪಾತ ಮತ್ತು ಬಂಜೆತನದಿಂದ ಆಗುವ ನಷ್ಟವನ್ನು ಪರಿಗಣಿಸಿದರೆ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಲಿದೆ.

ರಾಸುಗಳನ್ನು ಎಲ್‌ಎಸ್‌ಡಿ ಕಾಡುತ್ತಿದ್ದ ಹೊತ್ತಲ್ಲೇ ಆಫ್ರಿಕಾದ ಹಂದಿ ಜ್ವರ(ಎಎಸ್‌ಎಫ್) ದೇಶಕ್ಕೆ ಕಾಲಿರಿಸಿತು. ಕೀನ್ಯಾದಲ್ಲಿ 1921ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೋಗ, 2020ರಲ್ಲಿ ಅಸ್ಸಾಮಿನಲ್ಲಿ ಕಾಣಿಸಿಕೊಂಡು, 17 ರಾಜ್ಯಗಳಿಗೆ ಹರಡಿತು. ಲಸಿಕೆ ಇಲ್ಲವೆ ಔಷಧ ಇಲ್ಲದ ಈ ರೋಗ, ಚಿಗಟಗಳ ಮೂಲಕ ವೇಗವಾಗಿ ವ್ಯಾಪಿಸುತ್ತದೆ. ರೋಗಪೀಡಿತ ಹಂದಿಗಳನ್ನು ಕೊಂದು, ಸುಣ್ಣದಿಂದ ತುಂಬಿದ ಆಳವಾದ ಗುಂಡಿಗಳಲ್ಲಿ ಹೂಳಬೇಕಾಗುತ್ತದೆ. ಬೆಂಗಳೂರಿನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಮಾಹಿತಿ ಕೇಂದ್ರ(ಎನ್‌ಐವಿಇಡಿಐ)ಆದ್ಯತೆಯ 13 ಪಶುರೋಗಗಳನ್ನು ಪಟ್ಟಿ ಮಾಡಿದೆ. ಇವು ಅತ್ಯಂತ ವೇಗವಾಗಿ ಹರಡಿ, ಹೆಚ್ಚು ಸಾವಿಗೆ ಕಾರಣವಾಗಬಲ್ಲವು. ಈ ಪಟ್ಟಿಯಲ್ಲಿ ಎಲ್‌ಎಸ್‌ಡಿ ಮತ್ತು ಎಎಸ್‌ಎಫ್ ಇಲ್ಲ.

ಹವಾಮಾನ ಬದಲಾವಣೆ:
ಅರಣ್ಯ ನಾಶ ಹೆಚ್ಚಿದಂತೆ, ಹುದುಗಿದ್ದ ಸೂಕ್ಷ್ಮಜೀವಿಗಳು ಪ್ರಕಟಗೊಳ್ಳುತ್ತಿವೆ. ರೋಗ ಹರಡುವಿಕೆಯಲ್ಲಿ ಮಳೆ ವ್ಯತ್ಯಯ, ಪ್ರವಾಹ/ಬರ ಮತ್ತು ಉಷ್ಣ ಅಲೆಗಳು ಗಮನಾರ್ಹ ಪರಿಣಾಮ ಬೀರುತ್ತವೆ. ಅಂತರ್‌ರಾಷ್ಟ್ರೀಯ ಉಷ್ಣ ವಲಯ ಕೃಷಿ ಕೇಂದ್ರ(ಸಿಐಎಟಿ) ಆಫ್ರಿಕಾದ 54 ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಜಾನುವಾರು ರೋಗಗಳ ಸಂಭವನೀಯತೆಯಲ್ಲಿ ಹವಾಮಾನ ವ್ಯತ್ಯಯ ಪ್ರಮುಖ ಚಾಲಕ. ಉಳಿದ ಕಾರಣಗಳು-ಸಾಕುಪ್ರಾಣಿ ಉತ್ಪನ್ನಗಳ ಮಾರಾಟ, ಜನಸಂಖ್ಯೆ ಹೆಚ್ಚಳ ಮತ್ತು ಸಾಕುಪ್ರಾಣಿಗಳ ಭಾರೀ ಪ್ರಮಾಣದ ಸಾಕಣೆ. ನಿರ್ದಿಷ್ಟ ತಾಪಮಾನದಲ್ಲಿ ಪ್ರಾಣಿಗಳ ದೇಹ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ವೇಳೆ ತಾಪಮಾನ ಮಿತಿ ಮೀರಿದರೆ, ಉಷ್ಣ ಒತ್ತಡ, ಚಯಾಪಚಯ ಕ್ರಿಯೆಗಳಲ್ಲಿ ತಾರುಮಾರು, ಪುನರುತ್ಪಾದನೆ ವೇಗ ಹೆಚ್ಚಳ ಮತ್ತು ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಇದರಿಂದ ರೋಗ ಹಾಗೂ ಸಾವಿನ ಸಾಧ್ಯತೆ ಹೆಚ್ಚುತ್ತದೆ. ಬೇಸಿಗೆಯಲ್ಲಿ ರಾಸುಗಳನ್ನು ಕೆಚ್ಚಲು ಬಾವು ಕಾಡಲು ಇದೇ ಕಾರಣ. ದೇಶದಲ್ಲಿ ಎಲ್‌ಎಸ್‌ಡಿ ತೀವ್ರಗೊಳ್ಳಲು ವಂಶವಾಹಿ ಶೀಘ್ರವಾಗಿ ಮಾರ್ಪಾಡಾಗುವುದು ಮಾತ್ರವಲ್ಲದೆ, ಆರ್ದ್ರ-ಉಷ್ಣ ವಾತಾವರಣ ಕೂಡ ಕಾರಣ. ತಾಪಮಾನ ಹೆಚ್ಚಳಗೊಂಡಾಗ, ಚಿಗಟಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ. ಆಗ ಹೆಚ್ಚು ಆಹಾರ ಸೇವಿಸಬೇಕಾಗುತ್ತದೆ. ಆಹಾರಕ್ಕಾಗಿ ರಾಸುಗಳನ್ನು ಕಡಿಯುತ್ತವೆ. ಇದು ರೋಗ ಹರಡಲು ಕಾರಣ. ಎಲ್‌ಎಸ್‌ಡಿ ಪೀಡಿತ ರಾಸುಗಳನ್ನು ಆರೋಗ್ಯವಂತ ರಾಸುಗಳಿಂದ ಪ್ರತ್ಯೇಕಿಸಬೇಕು. ಆದರೆ, ಹಳ್ಳಿಗಾಡಿನಲ್ಲಿ ಕೊಟ್ಟಿಗೆಗಳು ಕಿರಿದಾಗಿರುವುದರಿಂದ, ಇಂಥ ಪ್ರತ್ಯೇಕಿಸುವಿಕೆ ಸಾಧ್ಯವಾಗುತ್ತಿಲ್ಲ. ಲೋಕಸಭೆಯಲ್ಲಿ ಡಿಸೆಂಬರ್ 2022ರಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವ, ''ಪಶುಗಳ ರೋಗಕ್ಕೆ ಹವಾಮಾನ ಬದಲಾವಣೆ ಕಾರಣ'' ಎಂದು ಹೇಳಿದ್ದರು. ಆರ್ದ್ರ ವಾತಾವರಣವಿದ್ದಾಗ ಸೂಕ್ತ ವಾತಾಯನ ವ್ಯವಸ್ಥೆ ಇರುವ ಕೊಟ್ಟಿಗೆಗಳಲ್ಲಿ ರಾಸುಗಳನ್ನು ಕಟ್ಟಬೇಕಾಗುತ್ತದೆ.

ಸ್ವಾಭಾವಿಕ ಪರಿಸರ ವ್ಯವಸ್ಥೆಗಳು ತೋಟ/ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಂತೆ, ಮನುಷ್ಯರು ಹಾಗೂ ಸಾಕುಪ್ರಾಣಿ-ವನ್ಯಜೀವಿಗಳ ಮುಖಾಮುಖಿ ಹೆಚ್ಚುತ್ತಿದೆ. ಹಿನ್ನಾಡುಗಳಲ್ಲಿ ಸಿಗಡಿ, ಹಂದಿ-ಕೋಳಿಗಳ ಕೈಗಾರಿಕಾ ಸಾಕಣೆಯಿಂದ ಮನುಷ್ಯರು, ಸಾಕುಪ್ರಾಣಿಗಳು ಮತ್ತು ವನ್ಯಜೀವಿಗಳ ವೈರಸ್‌ಗಳು ಮಿಶ್ರಗೊಳ್ಳುತ್ತಿವೆ. ಸೋಂಕು ವರ್ಗಾವಣೆಯಾಗುತ್ತಿದೆ. ಸಂಪರ್ಕ ಸುಲಭವಾಗಿರುವ ಜಗತ್ತಿನಲ್ಲಿ ಪ್ರಾಣಿಜನ್ಯ ರೋಗಗಳು ಬಹಳ ವೇಗವಾಗಿ ಹರಡುತ್ತವೆ; ನಾವೆಲ್ ಕೊರೋನ ವೈರಸ್ ಇದಕ್ಕೆ ಒಂದು ಉದಾಹರಣೆ.

ಸೋಂಕುಕಾರಕಗಳ ನೆಗೆಯುವಿಕೆ ಹೆಚ್ಚಿದೆ. ಕೋವಿಡ್-19 ಆರಂಭಗೊಂಡ ಬಳಿಕ ಪ್ರಕಟವಾದ ವಿಶ್ವಸಂಸ್ಥೆಯ ವರದಿಯೊಂದರ ಪ್ರಕಾರ, ಕಳೆದ 170 ವರ್ಷಗಳಲ್ಲಿ ಸಾಕುಪ್ರಾಣಿಗಳ 9 ಸೋಂಕುರೋಗಗಳು ಮನುಷ್ಯರಿಗೆ ವರ್ಗಾವಣೆಯಾಗಿವೆ. 1990ರ ಬಳಿಕ ಆರು. ಇದಕ್ಕೆ ತೀವ್ರ ಕೃಷಿ ಮುಖ್ಯ ಕಾರಣ. ಜಾಗತಿಕವಾಗಿ ಕೋಳಿ ಸಾಕಣೆ ಆರು ಪಟ್ಟು (ಉತ್ಪಾದನೆ 36 ಶತಕೋಟಿ), ಹಂದಿ ಸಾಕಣೆ ದುಪ್ಪಟ್ಟು(952 ದಶಲಕ್ಷ) ಹಾಗೂ ಹಸುಗಳ ಸಂಖ್ಯೆ 1.1 ಶತಕೋಟಿಯಿಂದ 1.5 ಶತಕೋಟಿಗೆ ಹೆಚ್ಚಿದೆ ಎಂದು 'ಗಾರ್ಡಿಯನ್' ನ ವರದಿ(ಅಕ್ಟೋಬರ್ 2022) ಹೇಳಿದೆ. ಸಾಕುಪ್ರಾಣಿಗಳಲ್ಲಿ ರೋಗಕ್ಕೆ ಕಾರಣವಾಗುವ ಶೇ.77ರಷ್ಟು ರೋಗಕಾರಕಗಳು ವನ್ಯಜೀವಿಗಳು-ಮನುಷ್ಯರಲ್ಲೂ ರೋಗ ಹರಡಬಲ್ಲವು. ಅಂತರ್‌ರಾಷ್ಟ್ರೀಯ ಸಾಕುಪ್ರಾಣಿಗಳ ಸಂಶೋಧನಾ ಸಂಸ್ಥೆ(ಐಎಲ್‌ಆರ್‌ಐ) ಪ್ರಕಾರ, ಪ್ರಾಣಿಜನ್ಯ ರೋಗಗಳಿಂದ ತೀವ್ರ ಹಾನಿಗೊಳಗಾಗುವ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದು(ಉಳಿದ ಮೂರು -ಇಥಿಯೋಪಿಯಾ, ನೈಜೀರಿಯಾ ಮತ್ತು ತಾಂಜಾನಿಯಾ). ಬೆಂಗಳೂರಿನ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಮಾಹಿತಿ ಕೇಂದ್ರ(ಎನ್‌ಐವಿಇಡಿಐ) ಪಟ್ಟಿ ಮಾಡಿದ 13 ರೋಗಗಳಲ್ಲಿ 4 ಪ್ರಾಣಿಜನ್ಯ ರೋಗಗಳು(ಆಂಥ್ರಾಕ್ಸ್, ಬೆಬೆಸಿಯೋಸಿಸ್, ಫ್ಯಾಸಿಯೋಲೋಸಿಸ್ ಮತ್ತು ಟ್ರೈಫಾನ್‌ಸೋಮೋಸಿಸ್).

ದುರಂತವೆಂದರೆ, ಸ್ಥಳೀಯ ರೋಗಗಳು ಶ್ರೀಮಂತ ದೇಶಗಳಲ್ಲಿ ಕಡಿಮೆಯಾಗುತ್ತಿದ್ದು, ಬಡ ದೇಶಗಳಲ್ಲಿ ಹೆಚ್ಚುತ್ತಿವೆ. ಇಂಥ ಹೊರೆ ಬೀಳುವುದು ಬಡ ರೈತರ ಮೇಲೆ. ಏಳರಲ್ಲಿ ಒಂದು ಪ್ರಾಣಿ ಒಂದಲ್ಲ ಒಂದು ರೋಗದಿಂದ ಬಳಲುತ್ತದೆ. ಇವು ಮನುಷ್ಯರಿಗೆ ರೋಗವನ್ನು ಹರಡದೇ ಇದ್ದರೂ, ರಾಸುಗಳ ಉತ್ಪಾದಕತೆ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗುತ್ತದೆ.

ಸಾಕುಪ್ರಾಣಿಗಳ ಮಾಹಿತಿ ಸಂಗ್ರಹ:
ನ್ಯಾಷನಲ್ ಡಿಜಿಟಲ್ ಲೈವ್‌ಸ್ಟಾಕ್ ಮಿಷನ್(ಎನ್‌ಡಿಎಲ್‌ಎಂ) ಅಡಿ 245 ದಶಲಕ್ಷ ಸಾಕುಪ್ರಾಣಿಗಳ ಮಾಹಿತಿ ಸಂಗ್ರಹಿಸಲಾಗಿದ್ದು, ದೇಶದ ಎಲ್ಲ ಸಾಕುಪ್ರಾಣಿಗಳ ದಾಖಲೀಕರಣ ಮಿಷನ್ ಉದ್ದೇಶ. ಪ್ರಾಣಿಗಳಿಗೆ ಆಧಾರ್ ಹೋಲುವ 12 ಅಂಕಿಗಳ ಗುರುತು ಸಂಖ್ಯೆ ನೀಡಲಾಗುತ್ತದೆ. ವಯಸ್ಸು, ತಳಿ, ಹಾಲಿನ ಪ್ರಮಾಣ, ಲಸಿಕೆ, ಕೃತಕ ಗರ್ಭಧಾರಣೆ ಮತ್ತು ಕರು ಜನನ ಕುರಿತ ಮಾಹಿತಿಯನ್ನು ಕೇಂದ್ರೀಯ ಮಾಹಿತಿ ಮೂಲದಲ್ಲಿ ಸಂಗ್ರಹಿಸಲಾಗುತ್ತದೆ. ಶುಲ್ಕರಹಿತ ಸಹಾಯವಾಣಿ ಸಂಖ್ಯೆ 1962ನ್ನು ಮೊಬೈಲ್ ಘಟಕಗಳೊಟ್ಟಿಗೆ ಜೋಡಿಸಲಾಗುತ್ತದೆ (ರಾಜ್ಯ ಸಹಾಯವಾಣಿ ಸಂಖ್ಯೆ 8277 100 200). ಇಂಥ ತಾಂತ್ರಿಕ ಮಧ್ಯಸ್ಥಿಕೆಗಳಿಗೆ ಮಾನವೀಯ

ಮುಖ ಇಲ್ಲದಿದ್ದರೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಅನುಭವಗಳು ಸಾಬೀತುಪಡಿಸಿವೆ.
ಸಾಕುಪ್ರಾಣಿಗಳ ದೇಖರೇಖಿಗೆ ರಾಜ್ಯದಲ್ಲಿ ಐದು ಹಂತದ ಪಶುವೈದ್ಯ ವ್ಯವಸ್ಥೆಯಿದ್ದು, ಜಿಲ್ಲಾ ಮಟ್ಟದಲ್ಲಿ 30 ಪಾಲಿಕ್ಲಿನಿಕ್, 665 ಪಶುವೈದ್ಯ ಆಸ್ಪತ್ರೆಗಳು, 2,135 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ 176 ಸಂಚಾರ ಪಶುವೈದ್ಯ ಸೇವೆ ವಾಹನಗಳಿವೆ. ಪಶುಗಳ ಸಂಖ್ಯೆಗೆ ಹೋಲಿಸಿದರೆ, ಈ ವ್ಯವಸ್ಥೆ ಸಾಲದು. ಮೊಬೈಲ್ ಚಿಕಿತ್ಸಾ ಘಟಕಗಳನ್ನು ಇನ್ನಷ್ಟು ಸಬಲಗೊಳಿಸಿ, ಪಂಚಾಯತ್‌ಗಳಿಗೆ ಉತ್ತರದಾಯಿಯಾಗಿ ಮಾಡಬೇಕಿದೆ. ವಿಜ್ಞಾನಿಗಳು ಗ್ರಾಮಗಳಿಗೆ ತಿಂಗಳಿಗೆ ಒಂದೆರಡು ಬಾರಿ ಭೇಟಿ ನೀಡಿ, ಮಾದರಿ ಸಂಗ್ರಹಿಸಿ, ಜಾಗೃತಿ ಮೂಡಿಸಬೇಕಾಗುತ್ತದೆ. ಪೋಲಿಯೊ ನಿವಾರಣೆಗೆ ನಡೆದ ಆಂದೋಲನದಂತೆ ರಾಸುಗಳಿಗೆ ಲಸಿಕೆ ಆಂದೋಲನ ಅಗತ್ಯವಿದೆ. ಎಲ್ಲ ಪಶುವೈದ್ಯ ಆಸ್ಪತ್ರೆಗಳಲ್ಲಿ ಶೀತಲ ಸಂಗ್ರಹ ಸೌಲಭ್ಯವಿಲ್ಲ. ಹೀಗಾಗಿ, ಲಸಿಕೆ ಸಂಗ್ರಹಿಸಲು ಆಗುತ್ತಿಲ್ಲ. ರಾಜ್ಯಗಳಲ್ಲಿ ರೋಗಪತ್ತೆ ಕೇಂದ್ರಗಳಿಲ್ಲದೆ ಇರುವುದರಿಂದ, ಎಲ್ಲ ರಾಜ್ಯಗಳೂ ಭೋಪಾಲ್‌ನ ರಾಷ್ಟ್ರೀಯ ಅಧಿಕ ಸುರಕ್ಷತೆಯ ಪ್ರಾಣಿ ರೋಗಗಳ ಸಂಸ್ಥೆಯನ್ನು ಆಧರಿಸಬೇಕಾಗಿ ಬಂದಿದೆ. ಇದರಿಂದ ನಮೂನೆಗಳ ಪರೀಕ್ಷೆಗೆ ಕನಿಷ್ಠ 15 ದಿನ ಬೇಕಾಗುತ್ತದೆ. ಒಂದುವೇಳೆ ರೋಗದಿಂದ ರಾಸುಗಳು ಮೃತಪಟ್ಟು ಪರಿಹಾರ ಸಿಗಬೇಕಿದ್ದರೆ, ವಿಮೆ ಮಾಡಿಸಬೇಕು. ಈ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯವಿದೆ. ಪರಿಹಾರ ಮೊತ್ತ ಪಡೆಯಲು ರೈತರು ಮೇಜುಗಳನ್ನು ಸುತ್ತುವ ಹಾಗೂ ಕಂಬಗಳಿಗೆ ತಿನ್ನಿಸುವ ಸ್ಥಿತಿ ತಪ್ಪಿಸಬೇಕಿದೆ. ರೈತರು ಹೆಚ್ಚು ಹಾಲಿನ ಆಸೆಯಿಂದ ಜರ್ಸಿ, ಎಚ್‌ಎಫ್ ತಳಿಗಳನ್ನು ಆಶ್ರಯಿಸಿ ಬಹಳ ಕಾಲ ಆಗಿದೆ. ಈಗ ಹಿಂದಿರುಗುವುದು ಕಷ್ಟ. ಆದರೆ, ರೋಗನಿರೋಧಕ ಶಕ್ತಿ ಹೆಚ್ಚು ಇರುವ ದೇವಣಿ, ಹಳ್ಳಿಕಾರ್, ಮಲೆನಾಡು ಗಿಡ್ಡ, ಅಮೃತಮಹಲ್ ಇತ್ಯಾದಿ ದೇಸಿ ರಾಸುಗಳನ್ನು ಸಾಕಲು ರೈತರನ್ನು ಪ್ರೋತ್ಸಾಹಿಸಬೇಕಿದೆ.

ಆದಾಯ ದುಪ್ಪಟ್ಟು, ವಾರ್ಷಿಕ 6,000 ರೂ. ನೇರ ವರ್ಗಾವಣೆಯಂಥ ಕಣ್ಕಟ್ಟುಗಳಿಂದ ರೈತರ ಉದ್ಧಾರ ಸಾಧ್ಯವಿಲ್ಲ. ಅಂತೆಯೇ, ರೈತರು-ಹೈನುಗಾರರನ್ನು, ಭೂಮಿಯನ್ನು, ರಾಸುಗಳನ್ನು ಉಳಿಸದೆ 'ನಂದಿನಿ' ಉಳಿಯಲಾರಳು.