ಹಿಜಾಬ್, ಹಲಾಲ್ ವಿವಾದ ಅನಗತ್ಯ, ನಾನು ಬೆಂಬಲಿಸುವುದಿಲ್ಲ: ಬಿ.ಎಸ್. ಯಡಿಯೂರಪ್ಪ
"ಹಿಂದೂ - ಮುಸಲ್ಮಾನರು ಸಹೋದರ, ಸಹೋದರಿಯರಂತೆ ಬಾಳಬೇಕು"
ಬೆಂಗಳೂರು: "ಹಿಂದೂಗಳು ಮತ್ತು ಮುಸಲ್ಮಾನರು ಸಹೋದರ, ಸಹೋದರಿಯರಂತೆ ಬಾಳಬೇಕು. ಆರಂಭದಿಂದಲೇ ನನ್ನ ನಿಲುವು ಇದೇ ಆಗಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿದ್ದ ಹಿಜಾಬ್, ಹಲಾಲ್ ಸುತ್ತ ವಿವಾದಗಳು ಅನಗತ್ಯವಾಗಿತ್ತು," ಎಂದು ಹಿರಿಯ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
indianexpress.com ಜೊತೆ ಸಂದರ್ಶನದಲ್ಲಿ ಮಾತನಾಡಿದ ಯಡಿಯೂರಪ್ಪ, ತಾನು ಹಿಜಾಬ್, ಹಲಾಲ್ ವಿವಾಗಳನ್ನು ಬೆಂಬಲಿಸುವುದಿಲ್ಲ ಎಂದರು.
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಪ್ರಮುಖವಾಗಿ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಆಗಮಿಸುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದವರಲ್ಲೊಬ್ಬರಾಗಿರುವ ಯಶಪಾಲ್ ಸುವರ್ಣ ಅವರಿಗೆ ಉಡುಪಿಯಲ್ಲಿ ಪಕ್ಷ ಟಿಕೆಟ್ ನೀಡಿದೆ.
ಹಿಂದೂಗಳು ಹಲಾಲ್ ಮಾಂಸ ತಿನ್ನಬಾರದೆಂದು ಹಿಂದುತ್ವ ಸಂಘಟನೆಗಳು ನೀಡಿದ ಕರೆ ಹಾಗೂ ಇದಕ್ಕೆ ಹಲವು ಪಕ್ಷದ ನಾಯಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು.
ಆಹ್ವಾನವಿರುವ ಹೊರತಾಗಿಯೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚರ್ಚ್ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ ತಾನು ಕೈಸ್ತರ ಮತ್ತು ಮುಸಲ್ಮಾನರ ಕಾರ್ಯಕ್ರಮಗಳಿಗೂ ಹೋಗುತ್ತಿದ್ದುದಾಗಿ ತಿಳಿಸಿದರು. "ಬೊಮ್ಮಾಯಿ ಕೂಡ ಹೋಗುತ್ತಿದ್ದರು. ಅವರಿಗೆ ಆಹ್ವಾನ ನೀಡಲಾದ ಸ್ಥಳಗಳಿಗೆ ಅವರು ಹೋಗಬೇಕಿತ್ತು. ಇಂತಹ ಕಾರ್ಯಕ್ರಮಗಳಿಗೆ ಮಹತ್ವ ನೀಡಬೇಕು, ಅವರು ಅಂತಹ ಕಾರ್ಯಕ್ರಮಗಳಿಗೆ ಹೋಗಬೇಕು," ಎಂದು ಯಡಿಯೂರಪ್ಪ ಹೇಳಿದ್ದಾರೆಂದು indianexpress.com ವರದಿ ಮಾಡಿದೆ.
ತಮ್ಮ ಪುತ್ರ ಬಿ ವೈ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಬೇಕೆಂಬುದು ತಮ್ಮ ಇಚ್ಛೆಯಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ, ಕೇಂದ್ರ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳು, ತಮ್ಮ ಸರ್ಕಾರದ ಅವಧಿಯಲ್ಲಿ ಹಾಗೂ ಈಗ ಬೊಮ್ಮಾಯಿ ಸರ್ಕಾರ ಕೈಗೊಂಡ ಯೋಜನೆಗಳಿಂದಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಯಡಿಯೂರಪ್ಪ ಹೇಳಿದರು.