ಹಿಂದುತ್ವ ಪ್ರಶ್ನಿಸಿ ಮಾಡಿದ್ದ ಟ್ವೀಟ್‌ಗಾಗಿ ಬಂಧಿಸಲ್ಪಟ್ಟಿದ್ದ ನಟ ಚೇತನ್ ಕುಮಾರ್ OCI ರದ್ದುಗೊಳಿಸಿದ ಕೇಂದ್ರ
ಹೊಸದಿಲ್ಲಿ: ಕನ್ನಡ ನಟ ಮತ್ತು ಹೋರಾಟಗಾರ ಚೇತನ್ ಕುಮಾರ್ (Chetan Kumar) ಅವರ ಓವರ್‌ಸೀಸ್ ಸಿಟಿಜನ್‌ಶಿಪ್ ಕಾರ್ಡ್ (OCI) ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಈ ಕುರಿತಂತೆ ನಟನಿಗೆ ಮಾರ್ಚ್ 28 ರಂದು ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಪತ್ರ ದೊರಕಿದೆ. ಪತ್ರ ದೊರಕಿದ 15 ದಿನಗಳಲ್ಲಿ ಒಸಿಐ ಕಾರ್ಡ್ ವಾಪಸ್ ನೀಡುವಂತೆ ಅವರಿಗೆ ಸೂಚಿಸಲಾಗಿದೆ.
ಬಲಪಂಥೀಯ ರಾಜಕಾರಣದ ಕಟುಟೀಕಾಕಾರರಾಗಿರುವ ಚೇತನ್ ಅವರನ್ನು ಮಾರ್ಚ್ 21 ರಂದು ಬೆಂಗಳೂರು ಪೊಲೀಸರು ಅವರು ಹಿಂದುತ್ವವನ್ನು ಪ್ರಶ್ನಿಸಿ ಮಾಡಿದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಬಂಧಿಸಿದ್ದರು.
ಚೇತನ್‌ಗೆ ಈ ಹಿಂದೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ ಜೂನ್ 2022 ರಲ್ಲಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಚೇತನ್ ಅವರು ನ್ಯಾಯಾಧೀಶರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಹಾಗೂ ಇತರ ದೇಶವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಆಗ ಆರೋಪಿಸಲಾಗಿತ್ತು. ಅವರ ಒಸಿಐ ಕಾರ್ಡ್ ಏಕೆ ರದ್ದುಗೊಳಿಸಬಾರದು ಎಂದು ಕೇಳಿ ನಿಗದಿತ ಸಮಯದೊಳಗೆ ಉತ್ತರಿಸುವಂತೆ ಆಗ ಅವರಿಗೆ ಸೂಚಿಸಲಾಗಿತ್ತು.
ಇದಕ್ಕೆ ಉತ್ತರಿಸಿದ್ದ ಚೇತನ್, ತಾವು ಭಾರತದಲ್ಲಿ ಹಲವು ವರ್ಷಗಳಿಂದ ವಾಸಗವಾಗಿದ್ದು ಇಲ್ಲಿ ನಟನೆ ಮತ್ತು ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಭಾರತೀಯ ನಾಗರಿಕರೊಬ್ಬರನ್ನೇ ವಿವಾಹವಾಗಿದ್ದಾಗಿ ಹೇಳಿದ್ದರು.
ಆದರೆ ಎಪ್ರಿಲ್ 14, 2023 ರಂದು ಗೃಹ ವ್ಯವಹಾರಗಳ ಸಚಿವಾಲಯ ಅವರಿಗೆ ನೋಟಿಸ್ ನೀಡಿ ಅವರ ʼದೇಶ-ವಿರೋಧಿ ಚಟುವಟಿಕೆಗಳು ಮತ್ತು ನ್ಯಾಯಾಧೀಶರ ವಿರುದ್ಧದ ನಿಂದನಾತ್ಮಕ ಹೇಳಿಕೆಗಳಿಗೆ ತಕ್ಷಣದಿಂದ ಅವರ ಒಸಿಐ ಕಾರ್ಡ್ ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿತ್ತು. ಅಷ್ಟೇ ಅಲ್ಲದೆ ನೋಟಿಸಿಗೆ ಅವರ ಉತ್ತರ ಸಮಾಧಾನಕರವಾಗಿರಲಿಲ್ಲ ಎಂದೂ ಹೇಳಿತ್ತು.
ತಮ್ಮ ಒಸಿಐ ಕಾರ್ಡ್ ರದ್ದತಿ ಹಿಂದೆ ಭಯದ ವಾತಾವರಣ ಸೃಷ್ಟಿಸುವ ಹಾಗೂ ಸರ್ಕಾರದ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡುವ ಉದ್ದೇಶವಿದೆ ಎಂದು ಚೇತನ್ ಹೇಳಿದ್ದಾರೆ.
ಮೂಲತಃ ಚಿಕಾಗೊ ನಿವಾಸಿಯಾಗಿದ್ದ ಚೇತನ್ ಅವರಿಗೆ 2018 ರಲ್ಲಿ ಒಸಿಐ ಕಾರ್ಡ್ ನೀಡಲಾಗಿತ್ತು. ಅಲ್ಲಿಯ ತನಕ ಅವರು ಪಿಐಒ ಅಂದರೆ ಪರ್ಸನ್ ಆಫ್ ಇಂಡಿಯನ್ ಒರಿಜಿನ್ ಆಗಿದ್ದರು.
ಇದನ್ನೂ ಓದಿ: ಕಾನೂನು ನೋಟಿಸ್ ನೀಡಿದ RSS ನಾಯಕ ರಾಮ್ ಮಾಧವ್‌ಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ: ಸತ್ಯಪಾಲ್ ಮಲಿಕ್