ಕೈ ತಪ್ಪಿದ ಬಿಜೆಪಿ ಟಿಕೆಟ್: ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಅಭಿಮಾನಿಗಳ ಒತ್ತಾಯ; ಶಾಸಕ ಎಸ್.ಎ.ರಾಮದಾಸ್ ಕಣ್ಣೀರು
ಮೈಸೂರು,ಎ.15: ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರ ಮನೆಗೆ ಮುತ್ತಿಗೆ ಹಾಕಿ ಪಕ್ಷೇತರರಾಗಿ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದರು. ಇದೇ ವೇಳೆ ಕಾರ್ಯಕರ್ತರುಗಳ ಅಭಿಮಾನಕ್ಕೆ ಮಣಿದು ಶಾಸಕ ಎಸ್.ಎ.ರಾಮದಾಸ್ ಕಣ್ಣೀರು ಹಾಕಿದರು.
ನಗರದ ವಿದ್ಯಾರಣ್ಯಪುರಂ ನಲ್ಲಿರುವ ಶಾಸಕ ಎಸ್.ಎ.ರಾಮದಾಸ್ ಅವರ ಮನೆಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ''ನಿಮಗೆ ಬಿಜೆಪಿ ಪಕ್ಷ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ನೀವು ಪಕ್ಷೇತರರಾಗಿ ಚುನಾವಣೆಗೆ ನಿಲ್ಲಬೇಕು. ನೀವು ಪಕ್ಷಕ್ಕಾಗಿ ಇಷ್ಟೊಂದು ಪ್ರಾಮಾಣಿಕವಾಗಿ ಕೆಲಸ ಮಾಡಿದಕ್ಕೆ ಇದೇನ ಪಕ್ಷ ನಿಮಗೆ ಕೊಟ್ಟ ಗೌರವ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ಕಾರ್ಯಕರ್ತರು ಅಭಿಮಾನಿಗಳು ಮುಖ್ಯ, ನಿಮ್ಮ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ. ಇನ್ನೂ ಕೆ.ಆರ್.ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಘೋಷಣೆ ಮಾಡಿಲ್ಲ. ಹಾಗಾಗಿ ತಾಳ್ಮೆಯಿಂದ ಇರಿ, ಪಕ್ಷ ನನಗೆ ತಾಯಿ ಇದ್ದಂತೆ ನಾನು ಮಾಡಿರುವ ಸೇವೆಗೆ ಎಂದೂ ಮೋಸ ಆಗುವುದಿಲ್ಲ ಎಂದು ನಂಬಿದ್ದೇನೆ. ದಯಮಾಡಿ ಎಲ್ಲರೂ ಸುಮ್ಮನಿರಿ ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ ಎಂದು ಹೇಳಿದರು.
ನಿಮ್ಮ ಒತ್ತಾಯಕ್ಕೆ ಮಣಿದು ನಾನು ದೆಹಲಿಗೆ ಹೋಗಿದ್ದೆ. ಅಲ್ಲಿ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡುವ ವಿಶ್ವಾಸ ನೀಡಿದ್ದಾರೆ. ಹಾಗಾಗಿ ದಯಮಾಡಿ ನೀವೆಲ್ಲರೂ ಸುಮ್ಮನಿರಿ, ಯಾವುದೇ ಕಾರಣಕ್ಕೂ ದುಡುಕುವ ನಿರ್ಧಾರ ಕೈಗೊಳ್ಳಬೇಡಿ, ನಿಮ್ಮ ಅಭಿಮಾನ ಪ್ರೀತಿಗೆ ನಾನು ತಲೆ ಬಾಗುತ್ತೇನೆ ಎಂದು ಹೇಳಿದರು.