ನನಗೆ ಕ್ಷೇತ್ರ ಇಲ್ಲ ಎಂದಿದ್ದ ಈಶ್ವರಪ್ಪಗೆ ಈಗ ಟಿಕೆಟ್ ಇಲ್ಲ: ಸಿದ್ದರಾಮಯ್ಯ ಲೇವಡಿ
ಕಾರವಾರ: ನನಗೆ ಕ್ಷೇತ್ರ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಈಶ್ವರಪ್ಪನವರಿಗೆ ಇದೀಗ ಟಿಕಟ್ ಇಲ್ಲದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಹಳಿಯಾಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನನಗೆ ಕ್ಷೇತ್ರ ಇಲ್ಲ ಎಂದು ಇದೇ ಈಶ್ವರಪ್ಪ ಟೀಕಿಸಿದ್ದರು. ನನಗೆ ರಾಜ್ಯದಲ್ಲಿ ಈಗಲೂ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆಗಾಗಿ ಆಹ್ವಾನ ಮಾಡುತ್ತಿದ್ದಾರೆ. ಆದರೆ ಒರ್ವ ಹಿರಿಯ ಮಾಜಿ ಡಿಸಿಎಂ ಆಗಿದ್ದ ಈಶ್ವರಪ್ಪನಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರ ಅಲ್ಲ ಸವದಿ, ಶೆಟ್ಟರ್ ಜೊತೆ ನಡೆದುಕೊಂಡ ರೀತಿ ಸರಿಯಲ್ಲ ಎಂದರು.
ಇನ್ನು ನನ್ನನ್ನು ಕಂಡು ಭಯಗೊಂಡಿದ್ದರಿಂದ ಇದೀಗ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆ ಭಯಸಿದ್ದಾರೆ. ಶಿಗ್ಗಾವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ ನಿಲ್ಲುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತ ಕ್ಯಾಂಡಿಡೇಟ್ ನಿಲ್ಲುತ್ತಾರೆ. ಅಲ್ಲದೆ ಇಂದು ಅಥವಾ ನಾಳೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಜಗದೀಶ ಶೆಟ್ಟರ್ ಒಳ್ಳೆಯ ಮುಖಂಡ. ಆದರೆ ನಾನು ಅವರೊಂದಿಗೆ ಮಾತನಾಡಿಲ್ಲ. ಅವರು ಸಮಯ ನಿಗದಿ ಮಾಡಿ ತಿರ್ಮಾನ ಕೈಗೊಳ್ಳುವ ಬಗ್ಗೆ ಗಮನಕ್ಕೆ ಇಲ್ಲ. ಆದರೆ ಅವರು ಬರುವ ತೀರ್ಮಾನ ಮಾಡಿದಲ್ಲಿ ಸ್ವಾಗತ ಮಾಡುತ್ತೇವೆ. ಅದೇ ರಿತಿ ಇತರೆ ಮುಖಂಡರು ಹಾಗೂ ಶಾಸಕರು ಸೇರ್ಪಡೆಯಾಗಲಿದ್ದಾರೆ. ಆದರೆ ಅವರ ಹೆಸರು ಹೇಳಲು ಆಗುವುದಿಲ್ಲ ಎಂದು ಹೇಳಿದರು.
ಮುಸ್ಲಿಂ ಮೀಸಲಾತಿ ರದ್ಧತಿ ಇದೀಗ ಸುಪ್ರಿಂ ಕೋರ್ಟ್ ಮುಂದೆ ಇದ್ದು ಈಗಾಗಲೇ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಲಿಂಗಾಯಿತರಿಗೆ ಒಕ್ಕಲಿಗರಿಗೆ ಮೀಸಲಾತಿ ನೀಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಂಮರಿಗೆ 1995 ರಿಂದ ಇದ್ದ 4 ರಷ್ಟು ಮಿಸಲಾತಿ ರದ್ದತಿ ಮಾಡಿರುವು ಧರ್ಮದ ಜಾತಿ ರಾಜಕಾರಣ ಮಾಡಲಾಗಿದೆ ಎಂದರು.