ಸಿಎಂ ಬೊಮ್ಮಾಯಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಬಿಜೆಪಿ ಟಿಕೆಟ್ ವಂಚಿತ ನೆಹರೂ ಓಲೆಕಾರ್
ಬೊಮ್ಮಾಯಿ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾನೆ ಎಂದ ಶಾಸಕ
ಬೆಂಗಳೂರು: ಸಿಎಂ ಬೊಮ್ಮಾಯಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಸಂಚಲನ ಸೃಷ್ಟಿಸಿದ್ದ ಬಿಜೆಪಿ ಟಿಕೆಟ್ ವಂಚಿತ ಶಾಸಕ ನೆಹರೂ ಓಲೆಕಾರ್ ಅವರು ಸಿಎಂ ಬೊಮ್ಮಾಯಿಗೆ ಏಕವಚನದಲ್ಲಿ ನಿಂದಿಸಿ, ಅವಾಚ್ಯ ಪದಬಳಕೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ಬೊಮ್ಮಾಯಿ ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾನೆ. ಹಿಂದಿನ ಬಾರಿ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡಿದ್ದ. ಕಡೇ ದಿನ ಬಿ–ಫಾರಂ ಬಂತು. ಅದಕ್ಕೆ ಕಾರಣ ಬಸವರಾಜ ಬೊಮ್ಮಾಯಿ. ಜನರ ಸಹವಾಸ ಜಾಸ್ತಿ ಇರುವ ಕಾರಣ ನಾನು ಬೆಳೆಯುತ್ತಿದ್ದೇನೆ ಎಂಬ ಕಾರಣಕ್ಕೆ ಟಿಕೆಟ್ ತಪ್ಪಿಸಿದ್ದಾರೆ’ ಎಂದು ಓಲೇಕಾರ್ ಆರೋಪಿಸಿದ್ದಾರೆ.
“ಇವರಿಗೆ ಜನಬೆಂಬಲ ಇತ್ತು ಅಂದಿದ್ದರೆ ಚಿತ್ರನಟ– ನಟಿಯರನ್ನು ಕರೆಸಿ ಕ್ಯಾನ್ವಾಸ್ ಏಕೆ ಮಾಡಿಸಬೇಕಿತ್ತು. ಕ್ಷೇತ್ರದ ಯಾವುದೇ ಜನರಿಗೆ ಈತ ಬೆಲೆ ಕೊಟ್ಟಿಲ್ಲ” ಎಂದು ಹರಿಹಾಯ್ದಿದ್ದಾರೆ. ಅಲ್ಲದೆ, ಸಿಎಂ ಬೊಮ್ಮಾಯಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.
ಹಾವೇರಿ ನಗರದ ತಮ್ಮ ನಿವಾಸದಲ್ಲಿ ಶನಿವಾರ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ಇದು ಎನ್ನಲಾಗಿದೆ.
ತುಂತುರು ನೀರಾವರಿ ಯೋಜನೆ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 1,500 ಕೋಟಿ ರೂ. ಕೊಳ್ಳೆ ಹೊಡೆದಿದ್ದಾರೆ. ಈ ಕುರಿತು ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಓಲೆಕಾರ್ ಈ ಹಿಂದೆ ಹೇಳಿಕೆ ನೀಡಿದ್ದರು.