×
Ad

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್

Update: 2023-04-16 11:31 IST

ಶಿರಸಿ, ಎ.16: ಬಿಜೆಪಿ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

ಇಂದು ಪೂರ್ವಾಹ್ನ 11 ಗಂಟೆ ಸುಮಾರಿಗೆ ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್‌ ಕೈತಪ್ಪುವುದು ಖಚಿತವಾಗುತ್ತಿದ್ದಂತೆ ಶೆಟ್ಟರ್  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶನಿವಾರ ರಾತ್ರಿ ಘೋಷಿಸಿದ್ದರು.

 ಅದರಂತೆ ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ತನ್ನ ಬೆಂಬಲಿಗರೊಂದಿಗೆ ಶಿರಸಿಗೆ ಆಗಮಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಶೆಟ್ಟರ್ ಅಲ್ಲಿಂದ ಬೆಂಗಳೂರಿನತ್ತ ಹೊರಟಿದ್ದಾರೆ.

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಜಗದೀಶ್ ಶೆಟ್ಟರ್ ಈಗಾಗಲೇ ಘೋಷಿಸಿದ್ದಾರೆ.

ಬಿಜೆಪಿ ಟಿಕೆಟ್ ವಿಚಾರವಾಗಿ ಕೊನೆಯ ವಿಸ್ಮಯವೇನು ನಡೆಯದು. ಹಾಗೇನಾದರೂ ನಡೆದರೂ ಮುಂದಿಟ್ಟ ಹೆಜ್ಜೆಯಿಂದ ಮತ್ತೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಸ್ಪೀಕರ್ ಭೇಟಿ ಬಳಿಕ ವಾಪಸ್ ಬಂದು ಹಿತೈಷಿಗಳ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಬಗ್ಗೆ ನಿರ್ಧರಿಸುತ್ತೇನೆ ಎಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ಅವರು ಹೇಳಿದ್ದಾರೆ.

Similar News