×
Ad

ಅದಾನಿ ಎಂದರೆ ಪ್ರಧಾನಿ ಮೋದಿಯ ಭ್ರಷ್ಟಾಚಾರದ ರೂಪ: ಕೋಲಾರದಲ್ಲಿ ರಾಹುಲ್‌ ವಾಗ್ದಾಳಿ

"ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ"

Update: 2023-04-16 17:03 IST

ಕೋಲಾರ: ಅದಾನಿಯು ಮೋದಿ ಅವರ ಭ್ರಷ್ಟಾಚಾರದ ಸಂಕೇತ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಿದ್ದಾನೆ, ಇದು 21ನೇ ಶತಮಾನದ ಪರಿಸ್ಥಿತಿ. ಅದಾನಿ ಅವರ  ರಕ್ಷಣಾ ಸಂಸ್ಥೆಯ ನಕಲಿ ಕಂಪನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಈತನನ್ನು ಯಾರು, ಯಾಕೆ ಕೂರಿಸಿದ್ದಾರೆ ಎಂಬುದರ ಬಗ್ಗೆ ಯಾರೂ ತನಿಖೆ ಮಾಡುತ್ತಿಲ್ಲ. ಕೇವಲ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೋಲಾರದಲ್ಲಿ ನಡೆದ ಜೈ ಭಾರತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ‘ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಅದಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ.ʼ ಎಂದು ಹೇಳಿದ್ದಾರೆ. 

“ನಾನು ಸಂಸತ್ತಿನಲ್ಲಿ ಅಧಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು ಕೇಳಿದೆ. ಮೋದಿ ಹಾಗೂ ಅದಾನಿ ವಿಮಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರವನ್ನು ನಾನು ಸಂಸತ್ತಿನಲ್ಲಿ ತೋರಿಸಿದೆ. ನಿಮ್ಮ ನಡುವಿನ ಸಂಬಂಧವೇನು ಎಂದು ಕೇಳಿದೆ. ದೇಶದ ವಿಮಾನನಿಲ್ದಾಣಗಳು ಅದಾನಿಗೆ ನೀಡುತ್ತಿದ್ದು, ಇದಕ್ಕಾಗಿ ನಿಯಮ ಬದಲಾಯಿಸಿದ್ದು ಯಾಕೆ? ಎಂದು ಕೇಳಿದೆ. ಈ ಹಿಂದೆ ವಿಮಾನ ನಿಲ್ಧಾಣವನ್ನು ಅನುಭವಿಗಳಿಗೆ ನೀಡಬೇಕು ಎಂಬ ನಿಯಮವಿತ್ತು, ಆದರೆ ಅದಾನಿ ಅವರಿಗೆ ಅನುಭವವಿಲ್ಲದಿದ್ದರೂ ಅವರಿಗೆ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ?” ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. 

“ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಈ ವಿಮಾನ ನಿರ್ಮಾಣ ಮಾಡಿದವರ ವಿರುದ್ಧ ಇಡಿ ಐಟಿ ದಾಳಿ ಮಾಡಿಸಿ ಅವರಿಂದ ಕಿತ್ತು ಅದಾನಿಗೆ ಕೊಟ್ಟಿದ್ದಾರೆ. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು ಎಂದಿದ್ದಾರೆ. ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ. ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೋನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ. ಸರ್ಕಾರದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದರು ಎಂದು ರಾಹುಲ್ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನೆರವು ನೀಡುತ್ತದೆ. ಮೋದಿ ಸರ್ಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗಾಗಿ ಬ್ಯಾಂಕುಗಳ ಬಾಗಿಲು ತೆಗೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಕಾರ್ಮಿಕರ ಸರ್ಕಾರವಾಗಲಿದೆ ಎಂದು ರಾಹುಲ್‌ ಭರವಸೆ ನೀಡಿದ್ದಾರೆ.

Similar News