×
Ad

ಬಿಜೆಪಿಗೆ ಹಿಂ.ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಶೇ.50ರ ಮೀಸಲಾತಿ ಮಿತಿ ರದ್ದುಪಡಿಸಲಿ: ರಾಹುಲ್ ಗಾಂಧಿ ಸವಾಲು

Update: 2023-04-16 20:18 IST

ಬೆಂಗಳೂರು: ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ತಮ್ಮ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಇದ್ದರೆ ಶೇ.50ರ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ’ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮೋದಿ, ಕೇಂದ್ರ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ರವಿವಾರ ಕೋಲಾರದಲ್ಲಿ ನಡೆದ ‘ಜೈ ಭಾರತ ಸಮಾವೇಶ'ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಮೋದಿ ಅವರ ಸರಕಾರದಲ್ಲಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಪೈಕಿ ಕೇವಲ ಶೇ.7 ಮಾತ್ರ ಹಿಂದುಳಿದವರು, ದಲಿತರು ಇದ್ದಾರೆ. ಇದು ಮೋದಿ ಕಾಳಜಿಯೇ? ಯುಪಿಎ ಸರಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂ.ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ ಎಂದು ಬಹಿರಂಗಪಡಿಸಲಿ. ಜತೆಗೆ ಅದರ ಅನುಗುಣವಾಗಿ ಸರಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ’ ಎಂದು ಹರಿಹಾಯ್ದರು.

‘ಕೆಲ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಈ ಸರಕಾರ ರಾಜ್ಯದ ಯುವಕರು, ಮಹಿಳೆಯರು, ಬಡವರಿಗಾಗಿ ಏನು ಮಾಡಲಿದೆ ಎಂದು ಹೇಳುತ್ತೇನೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆ ನಂತರ ಜನರಿಗೆ ಯಾವ ಕಾರ್ಯಕ್ರಮ ನೀಡಬಹುದು ಎಂದು ಬೇರೆ ರಾಜ್ಯಗಳ ಸಿಎಂಗಳು ನನ್ನನ್ನು ಕೇಳಿದರು. ಆಗ ನಾನು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ 2-3 ಭರವಸೆಗಳನ್ನು ಜಾರಿಗೆ ತರಬೇಕು. ಈ ಯೋಜನೆ ಜಾರಿ ಮಾಡಲು ವರ್ಷಗಟ್ಟಲೆ ಕಾಲಹರಣ ಮಾಡಬಾರದು. ಸರಕಾರ ಬಂದ ಕೂಡಲೇ ಅವುಗಳನ್ನು ಅನುಷ್ಠಾನಕ್ಕೆ ತರಲು ಸೂಚಿಸಿದೆ. ಇದನ್ನು ನಾನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳಬಯಸುತ್ತೇನೆ’ ಎಂದು ಅವರು ನುಡಿದರು.

‘ನಾವು ರಾಜ್ಯದ ಜನರಿಗೆ 4 ಗ್ಯಾರಂಟಿ ಯೋಜನೆ ನೀಡಿದ್ದೇವೆ. ‘ಗೃಹಜ್ಯೋತಿ’ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ, ‘ಗೃಹಲಕ್ಷ್ಮಿ’ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಪ್ರೋತ್ಸಾಹ ಧನ, ‘ಅನ್ನಭಾಗ್ಯ’ದ ಮೂಲಕ ಪ್ರತಿ ಸದಸ್ಯರಿಗೆ ತಲಾ 10ಕೆ.ಜಿ. ಅಕ್ಕಿ, ಇನ್ನು ಯುವನಿಧಿ ಯೇಜನೆ ಮೂಲಕ ಪ್ರತಿ ತಿಂಗಳು ನಿರುದ್ಯೋಗ ಪಧವೀದರರಿಗೆ 3 ಸಾವಿರ ರೂ., ಡಿಪ್ಲೋಮಾ ಪದವಿಧರರಿಗೆ 1,500 ರೂ. ನೀಡಲಾಗುವುದು. ಈ ಭರವಸೆಗಳು ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನ ಹಾಗೂ ಮೊದಲ ಸಂಪುಟದಲ್ಲಿ ಜಾರಿ ಮಾಡುತ್ತೇವೆ ಎಂದು ಪ್ರಕಟಿಸಿದರು.

‘ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಿ, ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ರೂ.ಹಣ ನೀಡುವುದಾದರೆ, ನಾವು ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಹೃದಯ ಪೂರ್ವಕವಾಗಿ ಅದಾನಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಬಿಜೆಪಿ ಸರಕಾರ ಏನು ಮಾಡಿದೆ? ಪ್ರತಿ ಕೆಲಸಗಳಲ್ಲಿ ಶೇ.40 ಕಮಿಷನ್ ತಿಂದಿದ್ದಾರೆ. ಇದು ನನ್ನ ಆರೋಪವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಆದರೆ, ಪ್ರಧಾನಿ ಈ ಪತ್ರಕ್ಕೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಅವರ ಮೌನ ಬಿಜೆಪಿ ಸರಕಾರ ಶೇ.40 ಸರಕಾರ ಎಂದು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಮೋದಿ, ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರಕಾರ ರಾಜ್ಯದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನೆರವು ನೀಡುತ್ತದೆ. ಮೋದಿ ಸರಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದೆ’ ಎಂದು ಅವರು ತಿಳಿಸಿದರು.

‘ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕಾಗಿದೆ. ಒಂದು ಮಾತು ನೆನಪಿನಲ್ಲಿಡಿ. ಬಿಜೆಪಿ ಸರಕಾರ ಶೇ.40 ಕಮಿಷನ್ ಹಣದಲ್ಲಿ ಸರಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಕದ್ದ ಹಣದಲ್ಲಿ ಸರಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ತಪ್ಪಿಸಬಹುದು’ ಎಂದು ಅವರು ಹೇಳಿದರು.

Similar News