×
Ad

ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ ವಿ. ನಾರಾಯಣ ಸ್ವಾಮಿ

Update: 2023-04-16 20:33 IST

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ವಿ.ನಾರಾಯಣ ಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆ. ಇದೆ ಕಾರಣಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀನಿವಾಸ್‌ ಕರಿಯಣ್ಣ  ಅವರಿಗೆ ಟಿಕೆಟ್‌ ಘೋಷಿಸಲಾಗಿದೆ. ಆದರೆ ತಮ್ಮ ಕಾರ್ಯಕರ್ತರು ಪಟ್ಟು ಹಿಡಿದಿರುವುದರಿಂದ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ ಎಂದು ನಾರಾಯಣ ಸ್ವಾಮಿ ಅವರು ತಿಳಿಸಿದರು.

ಗುರುವಾರ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ  ಸಲ್ಲಿಸಲು ನಿರ್ಧರಿಸಿದ್ದೇನೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಮುಖಂಡರು ತಮ್ಮ ಹೆಸರನ್ನು ಉನ್ನತ ಮಟ್ಟಕ್ಕೆ ಕಳುಹಿಸಿದ್ದರು. ಆದರೆ ಟಿಕೆಟ್‌ ತಪ್ಪಿದೆ. ಹಾಗಾಗಿ ಕಾರ್ಯಕರ್ತರು ಪಕ್ಷೇತರವಾಗಿ ಸ್ಪರ್ಧೆ ಮಾಡಿ ಅಥವಾ ಉನ್ನತ ಮಟ್ಟದಲ್ಲಿ ಬದಲಾವಣೆ ಮಾಡೋಕೆ ಆಗುತ್ತೆದೆಯೋ ನೋಡಿ ಅನ್ನುತ್ತಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷಗಳಲ್ಲಿ ಬದಲಾವಣೆ ಅಸಾಧ್ಯ. ಹಾಗಾಗಿ ಕಾರ್ಯಕರ್ತರ ನಿರ್ಧಾರಕ್ಕೆ ಬದ್ಧ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ದುಸ್ಥಿತಿಗೆ ತಲುಪಲು ಕಾರಣ ಇಂತಹ ಅಚಾತುರ್ಯದ ನಿರ್ಧಾರಗಳೆ ಆಗಿದೆ. ಆದರೆ ಬಿಜೆಪಿ ಕಠಿಣ ನಿರ್ಧಾರಗಳನ್ನು ಕೈಗೊಂಡಿದೆ. ಬಿಜೆಪಿಯ ಅರ್ಥಪೂರ್ಣ ನಿರ್ಧಾರ ತನಗೆ ಇಷ್ಟವಾಯಿತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ನಡುವೆ ಉನ್ನತ ಹಂತದಲ್ಲಿ ಒಳ ಒಪ್ಪಂದ ನಡೆದಿದೆ. ತಾನು ಸ್ಪರ್ಧೆ ಮಾಡಿದರೆ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳಿಗೆ ಸೋಲಾಗಬಹುದು ಎಂಬ ಕಾರಣಕ್ಕೆ ಒಳ ಒಪ್ಪಂದ ಆಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು.

ಶ್ರೀನಿವಾಸ್‌ ಕರಿಯಣ್ಣ ಅವರ ಸಂಬಂಧಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರ ಒತ್ತಡಕ್ಕೆ ಮಣಿದು ಟಿಕೆಟ್‌ ಪಡೆದಿದ್ದಾರೆ ಎಂದು ಆರೋಪಿಸಿದರು.

Similar News