ಬಿಜೆಪಿ ಮುಳುಗಿಸಿದ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ: ಲಕ್ಷ್ಮಣ ಸವದಿ

"ನನ್ನ, ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡುವ ನೈತಿಕತೆ ಯಡಿಯೂರಪ್ಪನವರಿಗೆ ಇಲ್ಲ"

Update: 2023-04-16 15:31 GMT

ಬೆಳಗಾವಿ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಬಿಜೆಪಿಯನ್ನು ಬಿಟ್ಟು ಹೊರ ಹೋಗಿ ಪಕ್ಷವನ್ನು ಮುಳುಗಿಸಿದ್ದರು. ನನ್ನ ಬಗ್ಗೆಯಾಗಲಿ, ಜಗದೀಶ್ ಶೆಟ್ಟರ್ ಅವರ ಬಗ್ಗೆಯಾಗಲಿ ಮಾತನಾಡುವ ನೈತಿಕತೆ ಯಡಿಯೂರಪ್ಪನವರಿಗೆ ಇಲ್ಲ’ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಜಿಲ್ಲೆಯ ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ಕಾರಣಕ್ಕಾಗಿ ನಾವು ಬಿಜೆಪಿ ಬಿಟ್ಟು ಹೋಗಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಂಡು ಯಡಿಯೂರಪ್ಪನವರು ಮಾತನಾಡಬೇಕು. ಸುಮ್ಮನೆ ನಮ್ಮ ವಿರುದ್ಧ ಟೀಕೆಗಳನ್ನು ಮಾಡುವುದಲ್ಲ’ ಎಂದು ತಿರುಗೇಟು ನೀಡಿದರು.

ದಶಕಗಳ ಕಾಲ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಜಗದೀಶ್ ಶೆಟ್ಟರ್ ಕುಟುಂಬದ ಪರಿಶ್ರಮವಿದೆ. ಅಂತಹ ಕುಟುಂಬಕ್ಕೆ ಬಿಜೆಪಿ ಅಪಮಾನ ಮಾಡಿದೆ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎಂಬಂತೆ ಬಿಜೆಪಿಗೆ ವಿನಾಶ ಕಾಲಬಂದಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವೆ ಇಲ್ಲ. ಕಾಂಗ್ರೆಸ್ ನಾಯಕರು ನನಗೆ 15 ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಗುರಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಕನಿಷ್ಠ 125ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

Similar News