ಓ ಮೆಣಸೇ...

Update: 2023-04-16 19:30 GMT

ಬಿಜೆಪಿ ಬಿಟ್ಟು ಬರಲು ಎಂಟೆದೆ ಬೇಕು: ಎಸ್.ವೈ.ಗೋಪಾಲಕೃಷ್ಣ, ಮೊಳಕಾಲ್ಮೂರು ಕಾಂಗ್ರೆಸ್ ಅಭ್ಯರ್ಥಿ
ಹೌದು, ಅವರ ಬಳಿಯಿರುವ ಸೀಡಿಗಳಿಗೆ ಹೆದರದೆ ಬಿಜೆಪಿ ತೊರೆಯುವುದಕ್ಕೆ ಎಂಟೆದೆಯೇ ಬೇಕು.

ಬಿಜೆಪಿಗೆ ಅಧಿಕಾರ ನೀಡಿದರೆ ಐದು ವರ್ಷಗಳಲ್ಲಿ ರಾಮರಾಜ್ಯ ಪರಿಕಲ್ಪನೆಯನ್ನು ಸಕಾರಗೊಳಿಸಲಾಗುವುದು -ಡಾ.ಸುಧಾಕರ್, ಸಚಿವ
ಶೂದ್ರ ಶಂಭೂಕರ ತಲೆಕತ್ತರಿಸುವ ಮೂಲಕ ರಾಮರಾಜ್ಯ ಸ್ಥಾಪನೆಯೆ?

ಅಸಭ್ಯ ಉಡುಪು ಧರಿಸುವ ಯುವತಿಯರು ರಾಮಾಯಣದಲ್ಲಿ ಬರುವ ಶೂರ್ಪನಖಿಯಂತೆ ಕಾಣುತ್ತಾರೆ - ಕೈಲಾಶ್ ವಿಜಯ ವರ್ಗಿಯ, ಮಧ್ಯಪ್ರದೇಶ ಬಿಜೆಪಿ ಪ್ರ.ಕಾರ್ಯದರ್ಶಿ
ಅಸಭ್ಯ ಉಡುಪು ಧರಿಸಿದ್ದಕ್ಕೆ ಶೂರ್ಪನಖಿಯ ಮೂಗು, ಕಿವಿ, ಮೊಲೆ ಕತ್ತರಿಸಲಾಯಿತೆ?

ಮಲ್ಲಿಕಾರ್ಜುನ ಖರ್ಗೆ ಸಿಎಂ ಆದರೆ ಅವರ ಜೊತೆ ಸಂತೋಷದಿಂದ ಕೆಲಸ ಮಾಡಲು ಸಿದ್ಧ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಸಂತೋಷದಿಂದ ಕೆಲಸ ಮಾಡಲಾರೆ ಎನ್ನುವ ಪರೋಕ್ಷ ಬೆದರಿಕೆ.

ಆರೆಸ್ಸೆಸ್ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
ಈವರೆಗೆ ಸ್ವಾರ್ಥಕ್ಕಾಗಿ ಸೇವೆ ಮಾಡಿರುವುದನ್ನು ಒಪ್ಪಿಕೊಂಡಂತಾಯಿತು.

ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರಕ್ಕೆ ಅಂತಹ ವ್ಯತ್ಯಾಸವೇನೂ ಇಲ್ಲ - ನರೇಂದ್ರ ಮೋದಿ, ಪ್ರಧಾನಿ
ಅದನ್ನು ತಮ್ಮ ಆಡಳಿತದಲ್ಲಿ ಸಾಬೀತು ಮಾಡಿ ಬಿಟ್ಟಿರಿ.

ಉತ್ತರ ಪ್ರದೇಶದಲ್ಲಿ ಈಗ ಗೂಂಡಾಗಳು ಪ್ಯಾಂಟ್‌ನಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದಾರೆ - ಯೋಗಿ ಆದಿತ್ಯನಾಥ್, ಉ.ಪ್ರ.ಸಿಎಂ
 ಗೂಂಡಾನೊಬ್ಬನ ಆಡಳಿತದಲ್ಲಿ ಆತನ ಎದುರಾಳಿ ಗೂಂಡಾಗಳು ಭಯಪೀಡಿತರಾಗುವುದು ಸಹಜವೇ ಆಗಿದೆ.

ಇಡೀ ದೇಶದಲ್ಲಿ ಗುಜರಾತ್ ಒಂದು ಮಾದರಿ ರಾಜ್ಯವಾಗಿದೆ -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ತಾವೇಕೆ ಗುಜರಾತ್‌ಗೆ ತೆರಳಿ ಅಲ್ಲೇ ಸಚಿವರಾಗಬಾರದು?

ಸಮಾನ ಮನಸ್ಕ ಪಕ್ಷಗಳೊಂದಿಗೆ ಕಾಂಗ್ರೆಸ್ ಕೈಜೋಡಿಸಲಿದೆ - ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ
ಇತರ ಪಕ್ಷಗಳನ್ನು ಸಮಾನವಾಗಿ ಕಾಣುವ ಹಿರಿತನವನ್ನು ಮೊದಲು ಬೆಳೆಸಿಕೊಳ್ಳಿ.

ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರಿಂದಾಗಿ ದಲಿತರು ಕುರಿ, ಮೇಕೆಗೆ ಬದಲಾಗಿ ಹುಲಿ, ಸಿಂಹದಂತೆ ಬದುಕಲು ಪ್ರೇರಣೆ ಸಿಕ್ಕಿದೆ - ಎಲ್.ಹನುಮಂತಯ್ಯ, ರಾಜ್ಯಸಭೆ ಸದಸ್ಯ
ಇದೀಗ ಆ ಹುಲಿ, ಸಿಂಹಗಳ ಭೇಟೆಗೆ ಮೋದಿ ಸಫಾರಿ ಆರಂಭಿಸಿದ್ದಾರಂತೆ.

ದತ್ತಮಾಲೆ ಧರಿಸಿ 15 ಕಿ.ಮೀ. ನಡೆದುಕೊಂಡು ಹೋಗಿರುವ ನಾನು ಈಗ ಹಿಂದುತ್ವ ಪಾಠ ಕಲಿಯುವ ಅಗತ್ಯವಿಲ್ಲ - ಸುನೀಲ್‌ಕುಮಾರ್, ಸಚಿವ
ಶಾಶ್ವತವಾಗಿ ಮಾಲೆ ಹಾಕಿ ತಿರುಗುವ ದಿನ ಬರಬಹುದು, ಎಚ್ಚರಿಕೆ.

ಬಿಜೆಪಿ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿಯಾಗಿದೆ-ಬಸವರಾಜ ಬೊಮ್ಮಾಯಿ, ಸಿಎಂ
ಹೌದು, ತಮ್ಮ ವಿರೋಧಿಗಳ ಗೆಲುವಿನ ದಿಕ್ಸೂಚಿ.

ಬಿಜೆಪಿ 'ಯುದ್ಧಕಾಲೇ ಶಸ್ತ್ರಾಭ್ಯಾಸ' ಎಂಬ ಪಕ್ಷವಲ್ಲ - ಬಿ.ವೈ.ರಾಘವೇಂದ್ರ, ಸಂಸದ
ಯುದ್ಧಕಾಲದಲ್ಲಿ ಪಕ್ಷಾಂತರಾಭ್ಯಾಸ ಎಂದರೆ ಸರಿಯೆ?

ಇಡೀ ಪ್ರಪಂಚದ ಹುಲಿ ಮೋದಿ - ಕೆ.ಎಸ್.ಈಶ್ವರಪ್ಪ, ಶಾಸಕ
ಮನುಷ್ಯಗುಣ ಸ್ವಲ್ಪವೂ ಇಲ್ಲ ಅಂತೀರಾ?

ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ಮೋದಿ ''ಪ್ಲೀಸ್ ಬರವಣಿಗೆಯನ್ನು ನಿಲ್ಲಿಸಬೇಡಿ'' ಎಂದು ಹೊಸ ಪುಸ್ತಕ ಬರೆಯುವಂತೆ ನನ್ನನ್ನು ಪ್ರೇರೇಪಿಸಿದರು - ಎಸ್.ಎಲ್.ಭೈರಪ್ಪ, ಸಾಹಿತಿ
ಸದ್ಯಕ್ಕೆ ಬಿಜೆಪಿಗೆ ಚುನಾವಣಾ ಪ್ರಣಾಳಿಕೆ ಬರೆಯುವ ಹೊಸ ಕೆಲಸ ಕೊಟ್ಟಿರಬೇಕು.

ರಾಜಕೀಯವೆಂದರೆ ತಂತ್ರ, ಕುತಂತ್ರ, ಮೋಸ, ದ್ವೇಷ, ಸುಳ್ಳು -ಜನಾರ್ದನ ರೆಡ್ಡಿ, ಮಾಜಿ ಸಚಿವ
ಇದು ನಿಮ್ಮ ಹೊಸ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆಯೆ?

ಯುಪಿಎಸ್‌ಸಿ ಮೂಲಕ ಆಯ್ಕೆಯಾದ ಅಧಿಕಾರಿಗಳು ಡಕಾಯಿತರು - ಬಿಶ್ವೇಶ್ವರ ಟುಡು, ಕೇಂದ್ರ ಸಚಿವ
ಇವಿಎಂ ಮೂಲಕ ಆಯ್ಕೆಯಾದ ಜನಪ್ರತಿನಿಧಿಗಳು?

ಭಾರತದಲ್ಲಿರುವ ಮುಸ್ಲಿಮರು ಪಾಕ್‌ನಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗಿಂತಲೂ ಉತ್ತಮ ಸ್ಥಿತಿಯಲ್ಲಿದ್ದಾರೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಪಾಕ್‌ಗಿಂತ ಭಾರತದ ಸರಕಾರ ಉತ್ತಮ ಸ್ಥಿತಿಯಲ್ಲಿದೆ ಎಂದು ತಮ್ಮ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಪ್ರಾಮಾಣಿಕ ಮತ್ತು ವಿಶ್ವಾಸದ ರಾಜಕೀಯಕ್ಕೆ ಈಗ ಬೆಲೆ ಇಲ್ಲ - ಅಂಗಾರ, ಸಚಿವ
ಟಿಕೆಟ್ ನಿರಾಕರಿಸಲ್ಪಟ್ಟಾಗ ನೆನಪಾಗುವ ಎರಡು ಪದಗಳು.

ಬ್ರಾಹ್ಮಣನೆಂಬ ಕಾರಣಕ್ಕೆ ನನಗೆ ಟಿಕೆಟ್ ತಪ್ಪಿಸಲಾಯಿತು - ರಘುಪತಿ ಭಟ್, ಶಾಸಕ
ಮೂರು ಬಾರಿ ನಿಮಗೆ ಟಿಕೆಟ್ ಕೊಟ್ಟದ್ದೇ ಬ್ರಾಹ್ಮಣನೆಂಬ ಕಾರಣಕ್ಕೆ ಎನ್ನುವುದನ್ನು ಮರೆತಿರಾ?

ನನ್ನ ಮಗಳು ಬಿಜೆಪಿ ಸೇರಿರುವುದು ಎದೆಗೆ ಚೂರಿ ಹಾಕಿದಂತಾಗಿದೆ - ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಮುಖಂಡ
ಕಾಂಗ್ರೆಸನ್ನು ನೀವು ಉಂಡು ತೇಗಿಯಾಗಿದೆ ಎನ್ನುವುದು ಮಗಳಿಗೆ ಚೆನ್ನಾಗಿ ಗೊತ್ತಿರುವಂತಾಗಿದೆ.

ಮೊದಲಿನ ಬಿಜೆಪಿಗೂ ಈಗಿನ ಬಿಜೆಪಿಗೂ ವ್ಯತ್ಯಾಸವಿದೆ - ಲಕ್ಷ್ಮಣ ಸವದಿ, ಮಾಜಿ ಡಿಸಿಎಂ
ಅಧಿಕಾರ ಇರದೇ ಇರುವಾಗ ಎಲ್ಲ ಪಕ್ಷಗಳು ಸಾಚಾ ಆಗಿರುತ್ತವೆ.

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!