ಏರುತ್ತಲೇ ಇದೆ ತಾಪಮಾನ; ತಾಳಲಾರದ ಬಿಸಿಲ ಝಳ

Update: 2023-04-17 08:27 GMT

ತೀವ್ರ ತಾಪಮಾನ ಒಂದೆಡೆ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ, ಇನ್ನೊಂದೆಡೆ ನೀರಿನ ಕೊರತೆಯೂ ಭಾರೀ ಪ್ರಮಾಣದಲ್ಲಿ ಕಾಡುತ್ತದೆ. ಅಲ್ಲದೆ ತೀವ್ರ ತಾಪಮಾನ ಕೃಷಿಯನ್ನೂ ಬಾಧಿಸುತ್ತದೆ. ಈಗಾಗಲೇ ಉತ್ತರ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಅಡಿಕೆ ಮರಗಳಿಗೆ ಅಂತರ್ಜಲ ಸಿಗದ ಸ್ಥಿತಿಯುಂಟಾಗಿದೆ. ಹಾಗೆಯೇ ಕೊಡಗಿನಲ್ಲಿಯೂ ಜಲಮೂಲಗಳು ಬತ್ತುತ್ತಿದ್ದು, ಕಾಫಿ ಸೇರಿದಂತೆ ಇತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.

ರಾಜ್ಯದಲ್ಲಿ ಒಂದೆಡೆ ಚುನಾವಣೆಯ ಕಾವು ಏರುತ್ತಿರುವಾಗಲೇ, ಬಿಸಿಲ ಝಳವಂತೂ ಜನರನ್ನು ಹೈರಾಣಾಗಿಸುತ್ತಿದೆ. ರಾಜ್ಯಾದ್ಯಂತ ಬೀದರ್‌ನ ನೆತ್ತಿಯಿಂದ ಚಾಮರಾಜನಗರದ ತಳದವರೆಗೂ ಬಿಸಿಲೋ ಬಿಸಿಲು. ತಾಳಲಾರದ ಧಗೆ. ಉತ್ತರ ಕರ್ನಾಟಕದಲ್ಲಿ ಎಂದಿನಂತೆ ಸೂರ್ಯ ನಿಷ್ಕರುಣಿ. ಕರಾವಳಿ, ಮಲೆನಾಡಿನ ಜಿಲ್ಲೆಗಳಲ್ಲಿಯೂ ತಾಪ ಕಡಿಮೆಯಿಲ್ಲ. ಸ್ಥೂಲವಾಗಿ ಹೇಳಬೇಕೆಂದರೆ, ಬೆಂಗಳೂರು ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು ಬಿಟ್ಟರೆ ಉಳಿದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅದರಾಚೆಗೇ ಇದೆ. ಕಲಬುರಗಿ, ಯಾದಗಿರಿಗಳಂಥಲ್ಲಿ ಆಗಲೇ 40-41 ಡಿಗ್ರಿ ದಾಟಿಹೋಗಿದೆ.

ರಾಜ್ಯದಲ್ಲಿ ಹೇಗಿದೆ ತಾಪಮಾನ ಎಂದು ನೋಡುವ ಮೊದಲು ದೇಶಾದ್ಯಂತ ಈ ಸಲದ ತಾಪಮಾನದ ಕುರಿತಾಗಿ ಏನೇನು ಎಚ್ಚರಿಕೆಗಳಿವೆ ಎಂಬುದನ್ನು ಒಮ್ಮೆ ಗಮನಿಸಬೇಕು.

ಈ ಬೇಸಿಗೆ ಅಪಾಯಕಾರಿಯಾಗಿರಲಿದೆ ಎಂಬ ಮುನ್ಸೂಚನೆಗಳು ಈಗಾಗಲೇ ಇವೆ. ದೇಶ ಈ ವರ್ಷ 1877ರಿಂದ ಈವರೆಗಿನ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ತಾಪಮಾನದ ಫೆಬ್ರವರಿಯನ್ನು ಕಂಡಿದೆ. ಪ್ರಾಣಕ್ಕೆ ಅಪಾಯವಾಗದ 35 ಡಿಗ್ರಿ ಸೆಲ್ಸಿಯಸ್ ವೆಟ್ ಬಲ್ಬ್ ತಾಪಮಾನದ ಮಿತಿಯನ್ನೂ ದಾಟಿ ಉಷ್ಣಾಂಶ ಏರಲಿರುವ ವಿಶ್ವದ ಮೊದಲ ಸ್ಥಳ ಭಾರತವೇ ಆದೀತು ಎಂದು ಕಳೆದ ವರ್ಷ ನವೆಂಬರ್‌ನಲ್ಲಿ ವಿಶ್ವಬ್ಯಾಂಕ್ ಎಚ್ಚರಿಸಿದೆ.

ವೆಟ್ ಬಲ್ಬ್ ತಾಪಮಾನವೆಂದರೆ ಏನು?

ಮನುಷ್ಯರು ದೊಡ್ಡ ಮಟ್ಟದಲ್ಲಿ ತೊಂದರೆಗೆ ಒಳಗಾಗುವುದು, ತಾಪಮಾನ ತೀವ್ರ ಏರಿರುವಾಗಲೇ ವಾತಾವರಣದಲ್ಲಿ ಆರ್ದ್ರತೆಯೂ ಹೆಚ್ಚು ಇದ್ದಾಗ. ಇದನ್ನೇ ವೆಟ್ ಬಲ್ಬ್ ತಾಪಮಾನ ಎನ್ನಲಾಗುತ್ತದೆ. ಶುಷ್ಕ ತಾಪಮಾನ ಮತ್ತು ಆರ್ದ್ರತೆ ಎರಡನ್ನೂ ಪರಿಗಣಿಸಿ ಕಂಡುಕೊಳ್ಳಲಾಗುವ ಉಷ್ಣಾಂಶವೇ ವೆಟ್ ಬಲ್ಬ್ ಉಷ್ಣಾಂಶ.

ಉದಾಹರಣೆಗೆ, ಹೈದರಾಬಾದ್‌ನಲ್ಲಿ ಶುಷ್ಕ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಆರ್ದ್ರತೆ ಶೇ. 55ರಷ್ಟು ಇದ್ದರೆ, ಅಲ್ಲಿನ ವೆಟ್ ಬಲ್ಬ್ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಎಂದು ಲೆಕ್ಕ ಹಾಕಲಾಗುತ್ತದೆ.

ಚೆನ್ನೈನಲ್ಲಿ, ಪ್ರಸ್ತುತ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇದ್ದು, ಶೇ. 73ರಷ್ಟು ಆರ್ದ್ರತೆಯಿದ್ದರೆ ಅಲ್ಲಿನ ವೆಟ್ ಬಲ್ಬ್ ತಾಪಮಾನ 29.8 ಡಿಗ್ರಿ ಸೆಲ್ಸಿಯಸ್ ಆಗುತ್ತದೆ. ಇದು ದೈಹಿಕ ಅಸ್ವಸ್ಥತೆ ತರುವ ಮಟ್ಟದ ತಾಪಮಾನವಾಗಿರುತ್ತದೆ. ಅಂದರೆ, ಹೆಚ್ಚಿನ ತಾಪಮಾನದ ಜೊತೆಗೆ ಆರ್ದ್ರತೆ ಮಟ್ಟವೂ ಹೆಚ್ಚಿದ್ದರೆ, ತಾಪಮಾನದಲ್ಲಿ ಭಾರೀ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

ಸರಳವಾಗಿ ಹೇಳುವುದಾದರೆ, ಇಂಥ ವಾತಾವರಣದಲ್ಲಿ ನಮ್ಮ ದೇಹವು ಬೆವರುವುದಿಲ್ಲ ಮತ್ತು ಅದರ ಪರಿಣಾಮವಾಗಿ ದೇಹದ ಉಷ್ಣಾಂಶ ಹೆಚ್ಚಿ ಅಪಾಯಕ್ಕೆಡೆ ಮಾಡಿಕೊಡಬಲ್ಲದು ಎಂಬುದು ಇದರಿಂದ ಗೊತ್ತಾಗುತ್ತದೆ. ಚೆನ್ನೈ, ಮಂಗಳೂರಿನಂಥ ಕರಾವಳಿ ಪ್ರದೇಶಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಕೂಡ ಹೆಚ್ಚು ಕಷ್ಟದ್ದಾಗುತ್ತದೆ. ಏಕೆಂದರೆ ಕರಾವಳಿ ಪ್ರದೇಶಗಳಲ್ಲಿ ಆರ್ದ್ರತೆ ಮಟ್ಟವೂ ತುಂಬಾ ಹೆಚ್ಚು. ವಾತಾವರಣ ಆರ್ದ್ರವಾಗಿದ್ದರೆ ದೇಹ ಬೆವರುವುದಿಲ್ಲ. ಬೆವರದೆ ದೇಹ ತಣ್ಣಗಾಗುವುದಿಲ್ಲ. ಇದು ಆಯಾಸಕ್ಕೆ, ಅಸ್ವಸ್ಥತೆಗೆ ಕಾರಣವಾ ಗುತ್ತದೆ. ಆದರೆ ಹೈದರಾಬಾದ್‌ನಂತಹ ಕರಾವಳಿಯಲ್ಲದ ಪ್ರದೇಶಗಳಲ್ಲಿ ಒಣಹವೆಯಿರುತ್ತದೆ ಮತ್ತು ಕಡಿಮೆ ಆರ್ದ್ರತೆಯಿರುತ್ತದೆ. ಇಲ್ಲಿ ಸುಲಭವಾಗಿ ಬೆವರುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದ್ದರೆ ಭಾರತ ಈ ಬೇಸಿಗೆಯಲ್ಲಿ ವೆಟ್ ಬಲ್ಬ್ ತಾಪಮಾನದ ಗಂಭೀರ ಅಪಾಯಕ್ಕೆ ಹತ್ತಿರವಿದೆ ಎಂದೂ ಪರಿಣತರು ಎಚ್ಚರಿಸಿದ್ದಾರೆ.

ಇಂಥ ಹೊತ್ತಲ್ಲಿ ಬಿಸಿಗಾಳಿಯ ಪರಿಣಾಮ ತಗ್ಗಿಸಲು, ದೈಹಿಕವಾಗಿ ದುರ್ಬಲರನ್ನು ರಕ್ಷಿಸಲು ಏನೇನು ಕ್ರಮಗಳು ಅಗತ್ಯವಾಗುತ್ತವೆ ಎಂಬುದರ ಕಡೆ ಗಮನ ಕೊಡುವುದು ಮುಖ್ಯವಾಗುತ್ತದೆ.

ಇನ್ನು ರಾಜ್ಯದ ವಿಚಾರಕ್ಕೆ ಬರುವುದಾದರೆ, ವಿವಿಧ ಜಿಲ್ಲೆಗಳಲ್ಲಿ ಆಗಲೇ ತಾಪಮಾನದಲ್ಲಿ ತೀವ್ರ ಏರಿಕೆ ದಾಖಲಾಗುತ್ತಿದೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದೂ ಅಷ್ಟೇ ನಿಜ. ಹವಾಮಾನ ಇಲಾಖೆ ನೀಡಿರುವ ಸುಳಿವಿನ ಪ್ರಕಾರ, ಮುಂದಿನ 2 ವಾರಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಈಗಿರುವುದಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಲಿದೆ. ಅಂದರೆ ಅದು 39 ಡಿಗ್ರಿ ಸೆಲ್ಸಿಯಸ್ ಮುಟ್ಟಲಿದೆ ಅಥವಾ ಅದನ್ನೂ ದಾಟಲಿದೆ.

ಇನ್ನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಂತೂ ಇದು 43ರಿಂದ 45 ಡಿಗ್ರಿ ಸೆಲ್ಸಿಯಸ್‌ವರೆಗೂ ಹೋಗಬಹುದು. ಮೈಸೂರು ಮೊದಲಾದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಈ ಸಲ ಬಿಸಿಲ ಝಳ ಜೋರಾಗಿಯೇ ಇದೆ. ಆಗಲೇ ಈ ಭಾಗಗಳಲ್ಲಿ 36-37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇದು ಈ ಭಾಗದ ಸಾಮಾನ್ಯ ಉಷ್ಣಾಂಶಕ್ಕಿಂತ 2-3 ಡಿಗ್ರಿಗಳಷ್ಟು ಹೆಚ್ಚು ಎನ್ನುತ್ತಾರೆ ಪರಿಣಿತರು.

ಈ ಭಾಗಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಸಾಮಾನ್ಯವಾಗಿ 33-35 ಡಿಗ್ರಿಯಷ್ಟು ತಾಪಮಾನವಿರುತ್ತದೆ. ಆದರೆ ಇದು ಈ ಬಾರಿ ಹೆಚ್ಚಿದೆ ಮತ್ತು ಇನ್ನೂ ಹೆಚ್ಚಲಿದೆ. ಹಾಗೆಯೇ ಬೆಂಗಳೂರು ಮತ್ತದಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲೂ ಮುಂದಿನ ಕೆಲವು ದಿನಗಳಲ್ಲಿ 37ರಿಂದ 38 ಡಿಗ್ರಿ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.

ಉಷ್ಣಾಂಶ ಜಾಸ್ತಿಯೇ ಆಗುತ್ತಿರುವುದು ಈಚಿನ ವರ್ಷಗಳಲ್ಲಿನ ಸಾಮಾನ್ಯ ವಿದ್ಯಮಾನ. ಸರಾಸರಿಗಿಂತ ಹೆಚ್ಚಿನ ಪ್ರಮಾಣದ ಉಷ್ಣಾಂಶ ಈ ಸಲ ಫೆಬ್ರವರಿಯಿಂದಲೇ ದಾಖಲಾಗತೊಡಗಿದ್ದನ್ನು ಸ್ಕೈಮೆಟ್ ಹವಾಮಾನ ಸಂಸ್ಥೆ ಗುರುತಿಸಿದೆ. ದೀರ್ಘಾವಧಿ ಮುನ್ಸೂಚನೆ ಪ್ರಕಾರ, ವಾಡಿಕೆಗಿಂತ ಈ ಸಲದ ಉಷ್ಣಾಂಶ ಜಾಸ್ತಿ ಇರಲಿದೆ. ಮತ್ತು ಅದನ್ನೀಗ ನಾವು ಕಾಣುತ್ತಿದ್ದೇವೆ. ಈಗಾಗಲೇ ಬಿಸಿಗಾಳಿಯ ಬಗ್ಗೆ ಸೂಚನೆಗಳಿದ್ದು, ಕರ್ನಾಟಕದ ಕೆಲವು ಭಾಗಗಳಲ್ಲಿ ಸಂಭಾವ್ಯತೆ ಹೆಚ್ಚು ಎನ್ನಲಾಗಿದೆ. ಬಿಸಿಗಾಳಿಯ ಸಾಧ್ಯತೆಯನ್ನು ವಿಶ್ಲೇಷಿಸುವುದು ಭಾರತೀಯ ಹವಾಮಾನ ಇಲಾಖೆ (ಐಎಂಡಿ).

ನಿರ್ದಿಷ್ಟ ಪ್ರದೇಶಗಳಲ್ಲಿ ಉಷ್ಣಾಂಶ ಹೆಚ್ಚಳ ಅಂದರೆ ಬಿಸಿಗಾಳಿ ಎರಡು ದಿನಗಳವರೆಗೆ ಇದ್ದರೆ ಯೆಲ್ಲೋ ಅಲರ್ಟ್ ಘೋಷಿಸಲಾ ಗುತ್ತದೆ. ಈ ಸನ್ನಿವೇಶದಲ್ಲಿ ಮಕ್ಕಳು, ವೃದ್ಧರು ಮತ್ತು ಕಾಯಿಲೆಯು ಳ್ಳವರು ಬಾಧಿತರಾಗುತ್ತಾರೆ.

ಬಿಸಿಗಾಳಿ ನಾಲ್ಕು ದಿನಗಳವರೆಗೆ ಮುಂದುವರಿದರೆ ಅಥವಾ ತೀವ್ರ ಬಿಸಿಗಾಳಿ ಎರಡು ದಿನ ಕಂಡುಬಂದರೆ ಆರೆಂಜ್ ಅಲರ್ಟ್ ಘೋಷಿಸ ಲಾಗುತ್ತದೆ. ಹೆಚ್ಚು ಕಾಲ ಬಿಸಿಲಿನಲ್ಲೇ ಕೆಲಸ ಮಾಡುವವರು ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಮಕ್ಕಳು ಮತ್ತು ವೃದ್ಧರ ಬಗ್ಗೆಯೂ ಹೆಚ್ಚು ಗಮನ ಕೊಡಬೇಕಿರುತ್ತದೆ.

ಬಿಸಿಗಾಳಿ ಆರು ದಿನಕ್ಕಿಂತ ಹೆಚ್ಚು ಕಾಲ ಅಥವಾ ತೀವ್ರ ಬಿಸಿಗಾಳಿ ಎರಡು ದಿನ ದಾಟಿಯೂ ಮುಂದುವರಿದರೆ ಉಷ್ಣಾಂಶ ಅತಿ ಹೆಚ್ಚಾಗಿದೆ ಎಂದರ್ಥ. ಆಗ ರೆಡ್ ಅಲರ್ಟ್ ಘೋಷಿಸಲಾಗುತ್ತದೆ. ತೀವ್ರ ಉಷ್ಣಾಂಶ ಸಂಬಂಧಿತ ತೊಂದರೆ ಎಲ್ಲರನ್ನೂ ಬಾಧಿಸುವ ಸಮಯ ಇದಾಗಿರುತ್ತದೆ. ಹೀಟ್ ಸ್ಟ್ರೋಕ್ ಕೂಡ ಸಂಭವಿಸಬಹುದು.

ಕರಾವಳಿಯಲ್ಲಿ ಕುಕ್ಕುಟೋದ್ಯಮ ಬಾಧಿತವಾಗಿದ್ದು, ಕೋಳಿಗಳ ಸಾವಿನ ಸಂಖ್ಯೆ ಹೆಚ್ಚಿರುವ ವರದಿಗಳಿವೆ. ಸಮುದ್ರದಲ್ಲಿ ಮೀನುಗಳ ಕೊರತೆ ತಲೆದೋರಿದೆ. ಇನ್ನು ಬೆಳೆದ ತಾಜಾ ಆಹಾರ ಪದಾರ್ಥಗಳ ಸಂರಕ್ಷಣೆ ಕೂಡ ಕಷ್ಟವಾಗುತ್ತಿದ್ದು, ಅವು ಬಹುಬೇಗ ಹಾಳಾಗುವುದು ಈ ಸಮಯದ ಮತ್ತೊಂದು ಬಹುದೊಡ್ಡ ಸಮಸ್ಯೆ. ಮೋಜಿಗಾಗಿ, ಐಷಾರಾಮಿ ಬದುಕಿಗಾಗಿ ಮನುಷ್ಯ ಮಾಡಿದ, ಮಾಡುತ್ತಿರುವ ಅಭಿವೃದ್ಧಿ ಹೆಸರಿನ ಪ್ರಮಾದ ಈ ಭೂಮಿಯನ್ನು ಇನ್ನು ನಿರಂತರವಾಗಿ ಬಾಧಿಸಲಿದೆ ಎಂಬುದು ಕಟುಸತ್ಯ. ಸಹ್ಯಾದ್ರಿಯ ಒಡಲು ಬಗೆದಾಗಿದೆ. ಕಾಡು ಬರಿದಾಗಿದೆ. ಮಳೆ ಬಾರದಂತೆ ಮಾಡಿಕೊಂಡಿ ದ್ದೇವೆ. ತಾಪಮಾನ ಏರಿಕೆಯ ಪರಿಣಾಮವಾಗಿ ಉಂಟಾಗಿರುವ ಹವಾಮಾನ ವೈಪರೀತ್ಯ ಮಳೆಗಾಲದ ನಿಶ್ಚಿತತೆಯನ್ನೇ ಛಿದ್ರ ಛಿದ್ರ ಮಾಡಿ ಬಿಟ್ಟಿದೆ. ಮಲೆನಾಡಿನ ಮಳೆ ಉತ್ತರ ಕರ್ನಾಟಕದಲ್ಲಿ ಧೋ ಎಂದು ಸುರಿದು ಎಲ್ಲವನ್ನೂ ಅಸ್ತವ್ಯಸ್ತ ಮಾಡಿದರೆ, ಬೇಡವಾಗಿರದ ಕಾಲದಲ್ಲಿ ಸುರಿವ ಮಳೆ ಉಂಟುಮಾಡುವ ನಷ್ಟ ಇನ್ನೊಂದು ಬಗೆಯದ್ದು. ಬಿಸಿಲು ಧಗಧಗಿಸುತ್ತಿರುವ ಈ ಹೊತ್ತಿನಲ್ಲಿ ಬದುಕು ಕಷ್ಟವಾಗುತ್ತಿರು ವುದು, ಆಯಾಸವು ದೇಹವನ್ನು ಮಾತ್ರವಲ್ಲ ಬದುಕನ್ನೇ ಕಾಡಿದಂತಾ ಗುವುದು ಪ್ರಕೃತಿಯ ಮೇಲಿನ ಮನುಷ್ಯನ ಅಸಡ್ಡಾಳ ಅನಾಚಾರದ ಅತ್ಯಂತ ತೀವ್ರ ಪರಿಣಾಮವೇ ಆಗಿದೆ.