ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಬಿಜೆಪಿ, ಆರೆಸ್ಸೆಸ್ ದಾಳಿ: ರಾಹುಲ್ ಗಾಂಧಿ ವಾಗ್ದಾಳಿ
ಬಿದರ್: 'ಬಿದರ್ ಬಸವಣ್ಣನವರ ಕರ್ಮಭೂಮಿ. ಬಸವಣ್ಣ ಶತಮಾನಗಳ ಹಿಂದೆಯೇ ಲೋಕತಂತ್ರದ ಬಗ್ಗೆ ಮಾತನಾಡಿದ್ದರು. ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದ್ದರೆ ಅದಕ್ಕೆ ಅಡಿಪಾಯ ಹಾಕಿದವರು ಬಸವಣ್ಣನವರು. ಆದರೆ ದುರಂತ ಎಂದರೆ, ಇಂದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಬಿಜೆಪಿ ಹಾಗೂ ಆರೆಸ್ಸೆಸ್ ದಾಳಿ ಮಾಡುತ್ತಿದೆ. ಸಮಾಜದಲ್ಲಿ ದ್ವೇಷ ಬಿತ್ತಿ, ಹಿಂಸೆ ಹೆಚ್ಚಿಸುತ್ತಿದ್ದಾರೆ. ದೇಶದ ಸಂಪತ್ತನ್ನು ಕೆಲವರ ಕೈಗೆ ನೀಡುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾಲ್ಕಿಯಲ್ಲಿ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಜನ ಕ್ರಾಂತಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಬಿಜೆಪಿ ಹಾಗೂ ಆರೆಸ್ಸೆಸ್ ಅವರ ವಿಚಾರಧಾರೆ ಬಸವಣ್ಣನವರ ವಿಚಾರಧಾರೆಗೆ ವಿರುದ್ಧವಾಗಿದೆ. ಈ ವಿರೋಧವಾಗಿ ಇವರು ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳ ಪ್ರಚಂಡ ಗೆಲುವು ಸಾಧಿಸಲಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಶೇ.40 ಕಮಿಷನ್ ಸರ್ಕಾರಕ್ಕೆ 40ಕ್ಕಿಂತ ಹೆಚ್ಚು ಕ್ಷೇತ್ರ ಸಿಗುವುದಿಲ್ಲ' ಎಂದು ಟೀಕಿಸಿದರು.
'ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ಅವರು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ ಎಂದರು. ನಿಮಗೆ ಆ ಹಣ ಸಿಕ್ಕಿತೇ? ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು, ನಿಮಗೆ ಉದ್ಯೋಗ ಸಿಕ್ಕಿತೇ? ನೋಟು ರದ್ದು ಮಾಡಿ ಕಪ್ಪುಹಣ ನಿರ್ಮೂಲನೆ ಮಾಡುತ್ತೇವೆ ಎಂದರು. ಕಪ್ಪು ಹಣ ನಿರ್ಮೂಲನೆಯಾಯಿತೇ? ಬಿಜೆಪಿ ಕೇವಲ ಸುಳ್ಳಿನ ಆಶ್ವಾಸನೆ ನೀಡುತ್ತಾ ಬಂದಿದೆ' ಎಂದು ಕಿಡಿಕಾರಿದರು.
'ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಾಲ್ಕು ಯೋಜನೆ ಜಾರಿ ಮಾಡುವ ಘೋಷಣೆ ಮಾಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೋಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ, ಗೃಹಜ್ಯೋತಿ ಮೂಲಕ ಪ್ರತಿ ತಿಂಗಳು ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ ಬಡ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತ ಹಾಗೂ ಯುವನಿಧಿ ಯೋಜನೆ ಮೂಲಕ ನಿರುದ್ಯೋಗ ಪದವೀಧರ ಯುವಕರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡಲಾಗುವುದು' ಎಂದು ಭರವಸೆ ನೀಡಿದರು.
'ಮೋದಿ ಅವರು ಈ ದೇಶದಲ್ಲಿ ಕೇವಲ ಒಂದಿಬ್ಬರು ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ಈ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನ ಸಾಮಾನ್ಯರಿಗಾಗಿ ನೀಡಲಾಗುತ್ತಿವೆ. ಈ ನಾಲ್ಕು ಯೋಜನೆ ಕರ್ನಾಟಕ ರಾಜ್ಯದ ಜನರ ಬದುಕು ಬದಲಿಸಲಿದೆ' ಎಂದರು.