ಬಳ್ಳಾರಿ ನಗರ ಕ್ಷೇತ್ರದಿಂದಲೇ ನಾನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ: ಅನಿಲ್ ಲಾಡ್
ಬಳ್ಳಾರಿ, ಎ. 17: ‘ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಾನು ನನ್ನ ರಾಜಕೀಯ ಅಸ್ತಿತ್ವಕ್ಕಾಗಿ ಈ ಬಾರಿ ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ಮಾಜಿ ಶಾಸಕ ಅನಿಲ್ ಲಾಡ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಮತಗಳ ಅಂತರದಿಂದ ಕಳೆದ ಚುನಾವಣೆಯಲ್ಲಿ ಸೋತ ನನಗೆ ಟಿಕೆಟ್ ತಪ್ಪಲು ಯಾವುದೇ ನೀಡಿಲ್ಲ. ಹೀಗಾಗಿ ನನ್ನ ಬೆಂಬಲಿಗರ ಆಶಯದಂತೆ ಬಂಡಾಯವಾಗಿ ಸ್ಪರ್ಧೆ ಮಾಡಲು ಬಯಸಿದ್ದೇನೆ. ಟಿಕೆಟ್ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಗೆ ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಿಲ್ಲ ಎಂದು ಹೇಳಿದರು.
ಕೂಡ್ಲಿಗಿಯ ಬಿಜೆಪಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ, ವಿಜಯನಗರದ ಮಾಜಿ ಶಾಸಕ ಗವಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಕಲಘಟಿಯಲ್ಲಿ 25ಸಾವಿರ ಮತಗಳಿಂದ ಸೋತ ಸಂತೋಷ್ ಲಾಡ್‍ಗೆ ಟಿಕೆಟ್ ನೀಡಿದ್ದೀರಿ. ಆದರೆ, ನನಗೆ ಮಾತ್ರ ಏಕೆ ಟಿಕೆಟ್ ನಿರಾಕರಣೆ ಮಾಡಲಾಗಿದೆ ಎಂದು ಅನಿಲ್ ಲಾಡ್ ಖಾರವಾಗಿ ಪ್ರಶ್ನಿಸಿದರು.
ಯಾವ ಮಾನದಂಡ ಆಧರಿಸಿ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಅನ್ನು ಭರತ್ ರೆಡ್ಡಿಗೆ ನೀಡಲಾಗಿದೆ ಗೊತ್ತಿಲ್ಲ. ಬಳ್ಳಾರಿಯ ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ಬರಲು ನಾನು ಕಾರಣ. ನಾಳೆ ಅಥವಾ ನಾಡಿದ್ದು, (ಎ.19, 20) ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಬಗ್ಗೆ ಆಲೋಚಿಸಿರುವೆ ಎಂದು ಅವರು ಸ್ಪಷ್ಟಪಡಿಸಿದರು.