ಮಾನ್ಯತೆ ಪಡೆಯದ ಪಕ್ಷಗಳು ಪ್ರಚಾರಕ್ಕೆ ಖಾಸಗಿ ವಾಹನ, ಧ್ವನಿವರ್ಧಕ ಬಳಸಬಹುದು: ಹೈಕೋರ್ಟ್
ಬೆಂಗಳೂರು, ಎ.17: ಇನ್ನೂ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಕೂಡ ತಮ್ಮ ಚುನಾವಣಾ ಮತ ಬೇಟೆಗಾಗಿ ಖಾಸಗಿ ವಾಹನಗಳು ಮತ್ತು ಧ್ವನಿ ವರ್ಧಕಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮಾನ್ಯತೆ ಪಡೆದ ಪಕ್ಷವಲ್ಲ ಎಂಬ ಕಾರಣ ನೀಡಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‍ಎಸ್)ಪಕ್ಷಕ್ಕೆ ಖಾಸಗಿ ವಾಹನ ಮತ್ತು ಧ್ವನಿ ವರ್ಧಕ ಬಳಕೆ ಮಾಡುವುದಕ್ಕೆ ಗದಗ ಮತ್ತು ಹೊಸಪೇಟೆ ಜಿಲ್ಲೆಯ ಚುನಾವಣಾಧಿಕಾರಿಗಳು(ಜಿಲ್ಲಾಧಿಕಾರಿಗಳ ಕಚೇರಿ) ನಿರಾಕರಿಸಿ ಆದೇಶಿಸಿದ್ದರು.
ಇದನ್ನು ಪ್ರಶ್ನಿಸಿ ಕೆಆರ್ ಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ಚುನಾವಣಾ ಅಧಿಕಾರಿಗಳು ಹೊರಡಿಸಿರುವ ಆದೇಶ ಮೇಲ್ನೋಟಕ್ಕೆ ಸಮರ್ಥನಿಯವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಅರ್ಜಿದಾರರ ಪಕ್ಷಕ್ಕೆ ಖಾಸಗಿ ವಾಹನ ಮತ್ತು ಧ್ವನಿವರ್ಧಕಗಳ ಬಳಕೆಗೆ ಮಧ್ಯಂತರ ಅನುಮತಿ ನೀಡಿ ಆದೇಶಿಸಿದೆ.
ಅರ್ಜಿದಾರರ ಕಚೇರಿ ಸಿಬ್ಬಂದಿಗೆ ವಾಹನ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡಲು ಪರವಾನಗಿ ನೀಡುವಂತೆ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಕೇಂದ್ರ ಚುನಾವಣಾ ಆಯೋಗ ಸೇರಿದಂತೆ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಜಾರಿ ಮಾಡಿದೆ.
ಪ್ರಕರಣವೇನು?: ಚುನಾವಣಾ ಪ್ರಚಾರಕ್ಕಾಗಿ ಖಾಸಗಿ ವಾಹನ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡಿಕೊಳ್ಳುವುದಕ್ಕಾಗಿ ಅನುಮತಿ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳು ಗದಗ ಮತ್ತು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿದ್ದ ಅಧಿಕಾರಿಗಳು, ರಾಷ್ಟ್ರೀಯ ಸಮಿತಿ ಪಕ್ಷ ಈವರೆಗೂ ಮಾನ್ಯತೆ ಪಡೆದಿಲ್ಲ ಎಂಬ ಕಾರಣ ನೀಡಿ ಅನುಮತಿ ನೀಡುವುದಕ್ಕೆ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.