ತರೀಕೆರೆ: ಟಿಕೆಟ್ ತಪ್ಪಿದ್ದಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಗೋಪಿಕೃಷ್ಣ ಕಣಕ್ಕೆ

Update: 2023-04-17 15:53 GMT

ಚಿಕ್ಕಮಗಳೂರು, ಎ.17: ಕಾಂಗ್ರೆಸ್ ಪಕ್ಷದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ತರೀಕೆರೆ ಕಾಂಗ್ರೆಸ್‍ನಲ್ಲಿ ಬಂಡಾಯ ಅಲೆ ಎದ್ದಿದ್ದು, ಮಾಜಿ ಶಾಸಕರಾದ ಎಸ್.ಎಂ.ನಾಗರಾಜ್, ಟಿ.ಎಚ್ ಶಿವಶಂಕರಪ್ಪ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ನೇತೃತ್ವದಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಸಭೆ ನಡೆಸಿದರು.

ಸೋಮವಾರ ತರೀಕೆರೆ ತಾಲೂಕಿನ ಅಜ್ಜಂಪುರ ತಾಲೂಕಿನ ಗಡಿಹಳ್ಳಿಯಲ್ಲಿರುವ  ಮಾಜಿ ಶಾಸಕ ಎಸ್.ಎಂ.ನಾಗರಾಜ್ ಅವರ ನಿವಾಸದಲ್ಲಿ  ಮಾಜಿ ಶಾಸಕ ಟಿ.ಎಚ್ ಶಿವಶಂಕರಪ್ಪ, ಗೋಪಿಕೃಷ್ಣ ಹಾಗೂ 10 ಮಂದಿ ಟಿಕೆಟ್ ಆಕಾಂಕ್ಷಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಬಂಡಾಯ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದು. ಅಂತಿಮವಾಗಿ ಎಚ್.ಎಂ.ಗೋಪಿಕೃಷ್ಣ ಅವರನ್ನು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಲಾಯಿತು. 

ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ, ಮೇ 10 ರಂದು ನಡೆಯುವ ವಿಧಾನ ಸಭಾ ಚುನಾವಣೆಗೆ ಕ್ಷೇತ್ರದಿಂದ 13 ಮಂದಿ ಅರ್ಜಿ ಸಲ್ಲಿಸಿದ್ದು, ಜಿ.ಎಚ್.ಶ್ರೀನಿವಾಸ್ ಹೊರತುಪಡಿಸಿ ಯಾರಿಗಾದರೂ ಟಿಕೆಟ್ ಕೊಡುವಂತೆ ಹೇಳಿದ್ದರೂ ಕೂಡ ಹೈಕಮಾಂಡ್ ನಮ್ಮನ್ನು ಕಡೆಗಣಿಸಿ ಅವರಿಗೆ ಟಿಕೆಟ್ ನೀಡಿರುವುದು ನಮ್ಮೆಲ್ಲರಿಗೂ ಬೇಸರ ತರಿಸಿದೆ. ಹಾಗಾಗಿ ಗೋಪಿಕೃಷ್ಣ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ನಿಲ್ಲಿಸಿ ಎಲ್ಲರೂ ಬೆಂಬಲ ನೀಡಿ, ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಪಕ್ಷ ಟಿಕೆಟ್ ನೀಡುವ ಶ್ರೀನಿವಾಸ್ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ನನ್ನ ಹಾಗೂ ಪಕ್ಷದ ವಿರುದ್ಧ ಕೆಲಸ ಮಾಡಿದ್ದರು. ಆದರೂ, ಪಕ್ಷ ಅವರಿಗೆ ಅವಕಾಶ ಮಾಡಿಕೊಟ್ಟಿರುವುದು ಪಕ್ಷ ಕಟ್ಟಿ ಬೆಳೆಸಿದವರಿಗೆ ನೋವುಂಟುಮಾಡಿದೆ. ಆದ್ದರಿಂದ ಈ ಬಾರಿ ಬಂಡಾಯ ಅಭ್ಯರ್ಥಿಯನ್ನಾಗಿ ಗೋಪಿಕೃಷ್ಣ ಅವರನ್ನು ಕಣಕ್ಕಿಳಿಸುತ್ತಿದ್ದೇವೆ. ಎಲ್ಲ ಆಕಾಂಕ್ಷಿಗಳು ಒಟ್ಟಾಗಿ ನಿರ್ಧಾರ ಮಾಡಿದ್ದೇವೆ. ನಾನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕಳೆದ ಬಾರಿ ನಾನು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕನಾಗಿದ್ದೇನೆ, ಆದರೂ ಕೂಡಾ ನಮ್ಮೆಲ್ಲರನ್ನೂ ಕರೆಸಿ ಮಾತನಾಡಿಸುವ ಸೌಜನ್ಯವನ್ನೂ ತೋರಲಿಲ್ಲ ಎಂದು ಪಕ್ಷದ ವರಿಷ್ಠರ ವಿರುದ್ಧ ಆರೋಪಿಸಿದರು.

ಕಾಂಗ್ರೆಸ್ ಟಿಕೆಟ್ ವಂಚಿತ, ಬಂಡಾಯ ಗೋಪಿಕೃಷ್ಣ ಮಾತನಾಡಿ, 2023ರ ಚುನಾವಣೆಗೆ 13 ಮಂದಿ ಅರ್ಜಿ ಸಲ್ಲಿಸಿದ್ದೆವು. 13 ಆಕಾಂಕ್ಷೆಗಳಲ್ಲಿ 12 ಮಂದಿ ಒಮ್ಮತದ ನಿರ್ಧಾರ ಮಾಡಿ,  ನನಗೆ ಬೆಂಬಲ ಸೂಚಿಸಿದ್ದಾರೆ, ಅವರೆಲ್ಲರ ನಿರ್ಧಾರವನ್ನು ಅಭಿನಂದಿಸಿ, ಸ್ವಾಗತಿಸುತೇನೆ. ಸಿದ್ದರಾಮಯ್ಯ ಅವರು ಎಲ್ಲ ವೇದಿಕೆಗಳಲ್ಲೂ ಕೂಡಾ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡುತ್ತೇನೆ ಎಂದು ಹೇಳಿಕೊಂಡು ಬರುವ ಮೂಲಕ  ಆಸೆ ತೋರಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸಹಾ ನನಗೆ ಟಿಕೆಟ್ ನೀಡಲು ಸಾಕಷ್ಟು ಪ್ರಯತ್ನ ಪಟ್ಟರು. ಸಿದ್ದರಾಮಯ್ಯರಿಗೆ ನನಗೆ ಟಿಕೆಟ್ ನೀಡುವ ಮನಸ್ಸಿದ್ದರೂ ಬೈರತಿ ಸುರೇಶ್ ಮಾತಿಗೆ ಕಟ್ಟುಬಿದ್ದು, ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಕ್ಷೇತ್ರದ ಎಲ್ಲ ಮುಖಂಡರು 12 ಮಂದಿಯಲ್ಲಿ ಯಾರಿಗಾದರೂ ಟಿಕೆಟ್ ನೀಡುವಂತೆ ಮನವಿ ಮಾಡಿದರೂ ಪಕ್ಷದ ವರಿಷ್ಟರು ಮಣೆ ಹಾಕಿಲ್ಲ. ನಾನು ಈಗಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ಮುಂದೆಯೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ರಾಜಕೀಯ ಪಕ್ಷಗಳು ನನ್ನನ್ನು ಕಡೆಗಣಿಸಿದ್ದರೂ, ನನ್ನ ಕ್ಷೇತ್ರದ ಜನತೆ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದ ಅವರು, ಎ.20 ರಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಟಿ.ಜೆ ಗೋಪಿಕುಮಾರ್, ಅಜ್ಜಂಪುರ ಕೃಷ್ಣಮೂರ್ತಿ, ಟಿ.ಜೆ ಶಶಾಂಕ್, ಕೆ.ಪಿ ಕುಮಾರ್, ದೃವಕುಮಾರ್, ಪ್ರಕಾಶ್, ಬೈಟು  ರಮೇಶ್, ಹಾಲುವಜ್ರಪ್ಪ, ಶಿವಮೂರ್ತಿ ಪಾಂಡುರಂಗ ಇತರರು ಇದ್ದರು. 

Similar News