ಅನಧಿಕೃತ ಖಾಸಗಿ ಶಾಲೆ ಮುಚ್ಚಿ, ವರದಿ ಸಲ್ಲಿಸುವಂತೆ ಶಿಕ್ಷಣ ಇಲಾಖೆ ಸೂಚನೆ

Update: 2023-04-17 16:32 GMT

ಬೆಂಗಳೂರು, ಎ.17: ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳನ್ನು 45 ದಿನದೊಳಗೆ ಮುಚ್ಚಬೇಕು. ಈ ಕುರಿತು ವರದಿಯನ್ನು ತಮ್ಮ ಕಚೇರಿಗೆ ಮೇ 25ರೊಳಗೆ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಇಲ್ಲಾಖೆಯ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಆದೇಶಿಸಿದ್ದಾರೆ. 

ಹಿಂದಿನ ವರ್ಷದಲ್ಲಿ ಅಂದರೆ 2022-23ರಲ್ಲಿ ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡಲಾಗಿದೆ. ಈ ಅನಧಿಕೃತ ಶಾಲೆಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ. 2023-24ರ ಸಾಲಿನಲ್ಲಿಯೂ ಈ ಅನಧಿಕೃತ ಶಾಲೆಗಳನ್ನು ಮುಂದುವರಿಸಿದರೆ, ಇಂತಹ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪೂರೈಸುವ ಪ್ರಮಾಣ ಪತ್ರಗಳ ನೈಜತೆಯ ಬಗ್ಗೆ ದೃಢೀಕರಿಸುವುದು ಕಷ್ಟವಾಗುತ್ತದೆ. ಇದು ವಿದ್ಯಾರ್ಥಿಗಳ ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

2023-24ರ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಅನಧಿಕೃತ ಶಾಲೆಗಳು ನಡೆಯುವುದು ಕಂಡುಬಂದರೆ ಜಿಲ್ಲಾ ಉಪನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. 

ಶಾಲಾ ನೋದಣಿ ಅಥವಾ ಅನುಮತಿಯನ್ನು ಪಡೆಯದೇ ನಡೆಸುತ್ತಿರುವ ಶಾಲೆಗಳು, ನೋದಣಿ ಇಲ್ಲದೆ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು, ರಾಜ್ಯಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿಯನ್ನು ಪಡೆದು, ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳು, ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು ಅನಧಿಕೃತ ಶಾಲೆಗಳೆಂದು ಪರಿಗಣಿಸಲಾಗಿದೆ. 

Similar News