ಆಸ್ತಿ ವಿವರ ಘೋಷಣೆ: ಎಂ.ಬಿ.ಪಾಟೀಲ್ ಶತಕೋಟಿ ಒಡೆಯ
ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಂ.ಬಿ.ಪಾಟೀಲ್ ಶತಕೋಟಿ ರೂ.ಒಡೆಯ. ಅವರ ಬಳಿ 8.59 ಕೋಟಿ ರೂ.ಮೌಲ್ಯದ ಚರಾಸ್ಥಿ ಹಾಗೂ 94.29 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಆಶಾ ಪಾಟೀಲ್ 12.39 ಕೋಟಿ ರೂ. ಹಾಗೂ ಮಗ ಧ್ರುವ ಪಾಟೀಲ್ 58.05 ಲಕ್ಷ ರೂ.ಚರಾಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿಯ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಆಶಾ ಪಾಟೀಲ್ 24.32 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಎಂ.ಬಿ.ಪಾಟೀಲ್ 34.26 ಕೋಟಿ ರೂ. ಹಾಗೂ ಆಶಾ ಪಾಟೀಲ್ 12.98 ಕೋಟಿ ರೂ.ಸಾಲವನ್ನು ಹೊಂದಿದ್ದಾರೆ. ಎಂ.ಬಿ.ಪಾಟೀಲ್ ಕೈಯಲ್ಲಿ ಒಂದು ಲಕ್ಷ ರೂ.ಹಾಗೂ ಆಶಾ ಪಾಟೀಲ್ ಕೈಯಲ್ಲಿ 50 ಸಾವಿರ ರೂ.ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ಎಂ.ಬಿ.ಪಾಟೀಲ್ ಹೆಸರಿನಲ್ಲಿ 11.99 ಲಕ್ಷ ರೂ. ಹಾಗೂ ಆಶಾ ಪಾಟೀಲ್ ಹೆಸರಿನಲ್ಲಿ 1.07 ಕೋಟಿ ರೂ.ಠೇವಣಿ ಮತ್ತು ಧ್ರುವ ಪಾಟೀಲ್ ಹೆಸರಿನಲ್ಲಿ 9.15 ಲಕ್ಷ ರೂ.ಗಳ ಠೇವಣಿ ಇದೆ.
ಜಮಖಂಡಿ ಶುಗರ್ಸ್‍ನಲ್ಲಿ ಒಂದು ಲಕ್ಷ ರೂ.ಗಳ ಷೇರುಗಳು, ಬಸವೇಶ್ವರ ಶುಗರ್ಸ್‍ನಲ್ಲಿ 30 ಲಕ್ಷ ರೂ.ಗಳ ಷೇರು, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2 ಸಾವಿರ ರೂ.ಗಳ ಷೇರುಗಳನ್ನು ಎಂ.ಬಿ.ಪಾಟೀಲ್ ಹೊಂದಿದ್ದಾರೆ. ಅಂಚೆ ಕಚೇರಿಯಲ್ಲಿನ ಉಳಿತಾಯ ಯೋಜನೆಯಡಿ ಎಂ.ಬಿ.ಪಾಟೀಲ್ ತಲಾ 20,150 ರೂ.ಗಳ ಆರು ಹೂಡಿಕೆ ಹಾಗೂ 10,075 ರೂ.ಗಳ ಎರಡು ಹೂಡಿಕೆಯನ್ನು ಹೊಂದಿದ್ದಾರೆ. ಆಶಾ ಪಾಟೀಲ್ ಎಲ್‍ಐಸಿಯಲ್ಲಿ 15 ಪಾಲಿಸಿಗಳಲ್ಲಿ ಒಟ್ಟು 29,271,950 ರೂ.ಗಳ ವಿಮೆಯನ್ನು ಹೊಂದಿದ್ದಾರೆ. ಧ್ರುವ ಹೆಸರಿನಲ್ಲಿ ಎಲ್‍ಐಸಿಯಲ್ಲಿ 48,89,560 ರೂ.ಗಳ ವಿಮೆ ಹೊಂದಿದ್ದಾರೆ.
ಎಂ.ಬಿ.ಪಾಟೀಲ್ ತಮ್ಮ ಪತ್ನಿಗೆ ನೀಡಿರುವ 7.79 ಲಕ್ಷ ರೂ.ಗಳು ಸೇರಿದಂತೆ ಇತರರಿಗೆ 5.59 ಕೋಟಿ ರೂ.ಸಾಲವನ್ನು ನೀಡಿದ್ದಾರೆ. ಆಶಾ ಪಾಟೀಲ್ ಡಾ.ಸಿ.ಆರ್.ಬಿದರಿ ಎಂಬವರಿಗೆ 45 ಲಕ್ಷ ರೂ., ಎಂ.ಬಿ.ಪಾಟೀಲ್ ಅವರಿಗೆ 4.18 ಕೋಟಿ ರೂ., ಬಿ.ಎಂ.ಪಾಟೀಲ್ ಅವರಿಗೆ 4.89 ಕೋಟಿ ರೂ., ದ್ರುವ ಪಾಟೀಲ್ ಅವರಿಗೆ 2.50 ಲಕ್ಷ ರೂ. ಹಾಗೂ ಬಂಜಾರ ಕಸೂತಿ ಸೊಸೈಟಿಗೆ 2 ಲಕ್ಷ ರೂ.ಸಾಲ ನೀಡಿದ್ದಾರೆ.
ವಾಹನಗಳು: ಎಂ.ಬಿ.ಪಾಟೀಲ್ ಹೆಸರಿನಲ್ಲಿ 8 ಲಕ್ಷ ರೂ.ಮೌಲ್ಯದ ಹೊಂಡಾ ಜೀಪ್, 97.22 ಲಕ್ಷ ರೂ.ಮೌಲ್ಯದ ಮರ್ಸಿಡಿಸ್ ಬೆಂಜ್, 1.50 ಕೋಟಿ ರೂ.ಮೌಲ್ಯದ ಬಿ.ಎಂ.ಡಬ್ಯ್ಲೂ ಕಾರು ಇದೆ. ಇವರ ಬಳಿ ಯಾವುದೆ ಆಭರಣಗಳು ಇಲ್ಲ. ಆಶಾ ಪಾಟೀಲ್ ಬಳಿ 8.33 ಲಕ್ಷ ರೂ.ಮೌಲ್ಯದ ಹೊಂಡಾ ಜಾಝ್ ಕಾರು, 14.78 ಲಕ್ಷ ರೂ.ಮೌಲ್ಯದ ಸ್ಕಾರ್ಪಿಯೊ, 10.50 ಲಕ್ಷ ರೂ.ಮೌಲ್ಯದ ಹುಂಡೈ ಐ10, 18 ಲಕ್ಷ ರೂ.ಮೌಲ್ಯದ ಇನ್ನೋವಾ, ತಾಯಿಯಿಂದ ಉಡುಗೊರೆ ರೂಪದಲ್ಲಿ ಬಂದಿರುವ ಹುಂಡೈ ಕ್ರೇಟಾ ಕಾರು ಇದೆ. 92.80 ಲಕ್ಷ ರೂ.ಮೌಲ್ಯದ 160 ತೊಲೆ ಬಂಗಾರ ಇದೆ.