×
Ad

ವಿಧಾನಸಭಾ ಚುನಾವಣೆ: ಹೆಲಿಕಾಪ್ಟರ್ ಗಳಿಗೆ ಎಲ್ಲಿಲ್ಲದ ಬೇಡಿಕೆ

Update: 2023-04-17 23:28 IST

ಬೆಂಗಳೂರು, ಎ.17: ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ಹೆಲಿಕಾಪ್ಟರ್‍ಗಳಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮೂರು ಪಕ್ಷಗಳ ನಾಯಕರುಗಳು ತುರ್ತು ಪ್ರಚಾರ, ಪ್ರವಾಸಕ್ಕೆ ಹೆಲಿಕಾಪ್ಟರ್‍ಗಳತ್ತ ಮುಖ ಮಾಡಲಾರಂಭಿಸಿದ್ದಾರೆ.

ರಾಜ್ಯದಲ್ಲಿ 100ಕ್ಕೂ ಅಧಿಕ ಹೆಲಿಕಾಪ್ಟರ್ ಗಳು ಹಾಗೂ ಮಿನಿ ವಿಮಾನಗಳಿವೆ. ಚುನಾವಣೆ ಪ್ರಚಾರ ಮತ್ತು ಸ್ಟಾರ್ ಪ್ರಚಾರಕರಿಗಾಗಿ ಹೆಲಿಕಾಪ್ಟರ್‍ಗಳಿಗೆ ಬೇಡಿಕೆ ಬಂದಿದ್ದು, ರಾಜಕಾರಣಿಗಳು ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಹೆಲಿಕಾಪ್ಟರ್‍ಗಳನ್ನು ತರಿಸಲಾರಂಭಿಸಿದ್ದಾರೆ. 

ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜೈಪುರ, ಹೊಸದಿಲ್ಲಿ, ಕೋಲ್ಕತಾ ಹಾಗೂ ಕೊಚ್ಚಿಯಿಂದ ಹೆಲಿಕಾಪ್ಟರ್‍ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಸರಿಸುಮಾರು 150 ಹೆಲಿಕಾಪ್ಟರ್‍ಗಳು ಹಾಗೂ ಮಿನಿ ವಿಮಾನಗಳನ್ನ ರಾಜಕಾರಣಿಗಳು ಬುಕ್ಕಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಲಿಕಾಪ್ಟರ್ ಮತ್ತು ಮಿನಿ ವಿಮಾನಗಳ ದರ (ಗಂಟೆಗೆ): ಎರಡು ಆಸನದ ಹೆಲಿಕಾಪ್ಟರ್‍ಗೆ ಗಂಟೆಗೆ 2 ಲಕ್ಷದ 10 ಸಾವಿರ ರೂ., 4 ಆಸನದ ಹೆಲಿಕಾಪ್ಟರ್‍ಗೆ ಗಂಟೆಗೆ 2 ಲಕ್ಷ 30 ಸಾವಿರ ರೂ.ದರವಿದ್ದು, ಇನ್ನು 6 ಆಸನದ ಮಿನಿ ವಿಮಾನಕ್ಕೆ 2ಲಕ್ಷ 60 ಸಾವಿರ ರೂ, 8 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ ಮೂರುವರೆ ಲಕ್ಷ ರೂ.ನಿಗದಿಯಾಗಿದೆ. ಇನ್ನು 13 ಆಸನದ ಮಿನಿ ವಿಮಾನಕ್ಕಾಗಿ ಗಂಟೆಗೆ 4 ಲಕ್ಷ ರೂ. ವ್ಯಯಿಸಬೇಕಿದೆ.

ಲ್ಯಾಂಡಿಂಗ್ ವ್ಯವಸ್ಥೆ: ಬೆಂಗಳೂರಿನ ಜಕ್ಕೂರು, ಹೆಚ್‍ಎಎಲ್, ವೈಟ್‍ಫೀಲ್ಡ್‍ನಲ್ಲಿ ಹೆಲಿಕಾಪ್ಟರ್ ಗಳ ನಿಲ್ದಾಣವಿದೆ. ಹುಬ್ಬಳ್ಳಿ, ಬೆಳಗಾವಿ, ಬೀದರ್, ಬಳ್ಳಾರಿ, ಕಲಬುರಗಿ ಸೇರಿದಂತೆ ರಾಜ್ಯದ ಹಲೆವೆಡೆ ಹೆಲಿಕಾಪ್ಟರ್‍ಗಳ ನಿಲ್ದಾಣಕ್ಕೆ ಜಾಗ ನಿಗದಿ ಮಾಡಲಾಗಿದೆ.

Similar News