ನನಗೆ ಬಿಜೆಪಿ ಟಿಕೆಟ್ ಕೈ ತಪ್ಪಲು ಬಿ.ಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್ ಆರೋಪ
Update: 2023-04-18 11:46 IST
ಹುಬ್ಬಳ್ಳಿ: ಬಿಜೆಪಿಯಲ್ಲಿ ನನಗೆ ಟಿಕೆಟ್ ಕೈ ತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, 'ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಕಾರಣ ಅಲ್ಲ. ಟಿಕೆಟ್ ತಪ್ಪೋಕೆ ಕಾರಣ ಆದವರ ಹೆಸರು ಹೇಳೋ ಸಮಯ ಇವತ್ತು ಬಂದಿದೆ. ಸಂತೋಷ್ ಷಡ್ಯಂತ್ರದಿಂದಾಗಿ ಪಕ್ಷಕ್ಕೆ ಹಾನಿಯಾಗಿದೆ. ಸಂತೋಷ್ ಜೊತೆಗೆ ಟಿಕೆಟ್ ಕೈ ತಪ್ಪಲು ಇನ್ನಷ್ಟು ಜನರ ಕೈವಾಡವೂ ಇದೆ' ಎಂದು ಆರೋಪಿಸಿದರು.
'ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಮಾಜಿ ಸಂಸದ ಅನಂತ ಕುಮಾರ್ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಕಟ್ಟಿದ್ದನೆ' ಎಂದು ಇದೇ ವೇಳೆ ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದರು.