×
Ad

ಸುಡಾನ್ ಸಂಘರ್ಷ: ಸಂಕಷ್ಟದಲ್ಲಿ ಸಿಲುಕಿದ 31 ಕನ್ನಡಿಗರು

ಕೇಂದ್ರ, ರಾಜ್ಯ ಸರಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ

Update: 2023-04-18 13:36 IST

ಬೆಂಗಳೂರು: ಆಫ್ರಿಕಾದ ಸುಡಾನ್‌ನಲ್ಲಿ ಸೇನೆ ಹಾಗೂ  ಅರೆಸೇನಾ ಪಡೆಗಳ ಮಧ್ಯೆ  ತೀವ್ರ ಘರ್ಷಣೆ ಯಲ್ಲಿ ಭಾರತೀಯರು ಸೇರಿದಂತೆ ಹಲವರು ಸಾವನ್ನಪ್ಪಿರುವ ಬೆನ್ನಲ್ಲೇ ಆಯುರ್ವೇದ, ಗಿಡಮೂಲಿಕೆಗಳ ಮಾರಾಟಕ್ಕೆಂದು ತೆರಳಿದ್ದ  ಕರ್ನಾಟಕದ 31ಕ್ಕೂ ಅಧಿಕ  ಬುಡಕಟ್ಟು ಜನಾಂಗದವರು ಆಫ್ರಿಕನ್ ದೇಶದಲ್ಲಿ ಹಿಂಸಾಚಾರದ ನಡುವೆ ಸಿಲುಕಿಕೊಂಡಿದ್ದಾರೆ.

ಅರೆ ಅಲೆಮಾರಿ ಬುಡಕಟ್ಟು ಗುಂಪಿಗೆ ಸೇರಿರುವ  ಹಕ್ಕಿಪಿಕ್ಕಿ ಜನಾಂಗದ 31 ಜನರು ಈ ವಾರಾಂತ್ಯದಲ್ಲಿ ಘರ್ಷಣೆಗಳು ಆರಂಭವಾದಾಗಿನಿಂದ ಊಟ, ನೀರು, ಆಹಾರವಿಲ್ಲದೆ ಪರದಾಡುತ್ತಿದ್ದಾರೆ . 3-4 ದಿನಗಳಿಂದ ಜನ ವಸತಿ ಮೇಲೆ ಬಾಂಬ್, ಗುಂಡು, ಕ್ಷಿಪಣಿ ಮೂಲಕ ದಾಳಿ ನಡೆದಿರುವ ದಾಳಿಯಿಂದ ಜನರು ಜೀವಕೈಯಲ್ಲಿಡಿದು ದಿನ ಎಣಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಡಾನ್‌ನಲ್ಲಿನ ಬುಡಕಟ್ಟು ಜನಾಂಗದವರ ಪರಿಸ್ಥಿತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (ಎಂಇಎ) ತಿಳಿಸಿದ್ದು, ಸಿಕ್ಕಿಬಿದ್ದ ಜನರು ಹೊರಗೆ ಹೋಗದಂತೆ ಹಾಗೂ  ದೇಶದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಸೂಚನೆಗಳನ್ನು ಪಾಲಿಸುವಂತೆ ಒತ್ತಾಯಿಸಿದೆ.

"ಕರ್ನಾಟಕದ 31 ಜನರ ಗುಂಪು ಸುಡಾನ್‌ನಲ್ಲಿ ಸಿಲುಕಿಕೊಂಡಿದೆ ಎಂಬ ಸಂದೇಶ ನಮಗೆ ಬಂದಿದೆ. ನಾವು ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದ್ದೇವೆ. ನಾವು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸೂಚನೆಗಳನ್ನು ಅನುಸರಿಸಲು ಕನ್ನಡಿಗರನ್ನು  ಕೇಳಿಕೊಂಡಿದ್ದೇವೆ’’ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ ಮನೋಜ್ ರಾಜನ್ ಹೇಳಿದರು.

ಕೇಂದ್ರ, ರಾಜ್ಯ ಸರಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹಾಗೂ  ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವನ್ನು "ಕನ್ನಡಿಗ ವಿರೋಧಿ" ಎಂದು ಕರೆದ ಕಾಂಗ್ರೆಸ್, ಆರಂಭಿಕ ಹಂತದಲ್ಲಿಯೇ ಸುಡಾನ್‌ನಲ್ಲಿರುವ  ಹಕ್ಕಿಪಿಕ್ಕಿ ಜನಾಂಗದ ಜನರನ್ನು ರಕ್ಷಿಸಲು ಸರಕಾರ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೇಂದ್ರ ಹಾಗೂ  ಕರ್ನಾಟಕ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು,

ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಕನ್ನಡ ವಿರೋಧಿ ಮೋದಿ ಸರಕಾರವು ಅವರನ್ನು ಸ್ಥಳಾಂತರಿಸುವ ಹಾಗೂ  ಸುರಕ್ಷಿತವಾಗಿ ಕರೆತರುವ ಬದಲು ಅವರನ್ನು ಹಾಗೆಯೇ ಬಿಟ್ಟಿದೆ. ಪ್ರಹ್ಲಾದ್ ಜೋಶಿ ಮತ್ತು ಶೋಭಾ ಕರಂದ್ಲಾಜೆ ಹಾಗೂ  ಬಿಜೆಪಿ ಸಂಸದರು ಎಲ್ಲಿದ್ದಾರೆ? ಮಿಸ್ಟರ್ ಬೊಮ್ಮಾಯಿ ನಾಚಿಕೆ ಆಗಬೇಕು ನಿಮಗೆ" ಎಂದು ಸುರ್ಜೇವಾಲಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

"ಪ್ರಧಾನಿ ಮೋದಿ ಹಾಗೂ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರು ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳಬೇಕು'' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕನ್ನಡಿಗರನ್ನು  ಮರಳಿ ಮನೆಗೆ ಕರೆತರಲು ಇನ್ನಷ್ಟೇ  ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಪಿಸಿದ ಅವರು, ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

Similar News