ಆರೆಸ್ಸೆಸ್ ನವರು ಕೂಡ ನನಗೆ ಮತ ಹಾಕಲಿದ್ದಾರೆ: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ

''ನಾನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ''

Update: 2023-04-18 12:45 GMT

ಬೆಂಗಳೂರು, ಎ. 18: ‘ಆರೆಸ್ಸೆಸ್ ನಲ್ಲಿಯೂ ನನ್ನ ಹಿತೈಷಿಗಳಿದ್ದು, ಗುಪ್ತ ಮತದಾನವಾಗಿದ್ದು, ನನಗೆ ಅವರು ಖಂಡಿತವಾಗಿಯೂ ನೂರಕ್ಕೆ ನೂರಷ್ಟು ಮತ ಹಾಕಲಿದ್ದಾರೆ’ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಅಥಣಿ ಮಿನಿ ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆರೆಸ್ಸೆಸ್ ನಲ್ಲೂ ನನಗೆ ಬಹಳಷ್ಟು ಮಂದಿ ಸ್ನೇಹಿತರು ಇದ್ದಾರೆ. ಇದರಿಂದ ನನಗೆ ನೂರಕ್ಕೂ ನೂರರಷ್ಟು ಮತ ನೀಡುತ್ತಾರೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದಾಗ ಇಲ್ಲಿನ 11 ಜನ ಟಿಕೆಟ್ ಆಕಾಂಕ್ಷಿಗಳು ಹಾಗೂ ಸಾವಿರಾರು ಜನ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಬರಮಾಡಿಕೊಂಡು ಧೈರ್ಯ ತುಂಬಿದ್ದಾರೆ’ ಎಂದು ಹೇಳಿದರು.

‘ಬಹಳ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಗಮಿಸಿ ‘ಆಗೆ ಬಡೋ ತುಮ್ಹಾರಾ ಸಾಥ್ ಹಮ್ ಹೈ’ ಎಂಬ ಘೋಷಣೆಯ ಮೂಲಕ ನನಗೆ ಧೈರ್ಯ ತುಂಬುವುದರ ಜೊತೆಗೆ ಮನಸಾರೆ ಕಾಂಗ್ರೆಸ್ ಪರವಾಗಿ ಕಾರ್ಯ ಮಾಡ್ತೀವಿ ಎಂದು ಹೇಳುತ್ತಿದ್ದಾರೆ ಎಂದ ಅವರು, ನಾನು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ' ಎಂದು ನುಡಿದರು.

ಆರನೇ ಬಾರಿಗೆ ನಾಮಪತ್ರ: 1999, 2004, 2008, 2013, 2018, 2023 ಸೇರಿದಂತೆ ಸತತ ಆರನೇ ಬಾರಿ ಅಥಣಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದು, ಆರು ಅವಧಿ ಪೈಕಿ ಎರಡು ಬಾರಿ ಲಕ್ಷ್ಮಣ ಸವದಿ ಸೋಲು ಕಂಡಿದ್ದಾರೆ. ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ 2023ರಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ. 

Similar News