ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ

Update: 2023-04-18 13:40 GMT

ಬೆಂಗಳೂರು, ಎ.18: ಅಕ್ರಮ ಅದಿರು ಮಾರಾಟ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಕಾಂಗ್ರೆಸ್ ಶಾಸಕ ನಾಗೇಂದ್ರ ಸೇರಿದಂತೆ 16 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣಗಳ ಕಾಯ್ದೆ 1957 ಅಡಿ, ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ತಿಳಿಸಿದ್ದು, ಅರ್ಜಿ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಲಾಗಿದೆ.

2008 ಹಾಗೂ 2011ರ ಅವಧಿಯಲ್ಲಿ ಕಬ್ಬಿಣದ ಅದಿರು ಮಾರಾಟ ಪ್ರಕರಣದಲ್ಲಿ ರಾಜ್ಯದ ಬೊಕ್ಕಸಕ್ಕೆ 211 ಕೋಟಿ ರೂ. ನಷ್ಟ ಉಂಟು ಮಾಡಿರುವ ಆರೋಪದ ಸಂಬಂಧ ದೂರು ದಾಖಲಾಗಿತ್ತು. ರಾಜ್ಯ ಸರಕಾರಕ್ಕೆ ರಾಯಲ್ಟಿ ಹಾಗೂ ಸೆಸ್ ಪಾವತಿ ತಪ್ಪಿಸಲು ಆರೋಪಿಗಳು ತಂತ್ರ ರೂಪಿಸಿದ್ದರು ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮೊದಲ ಆರೋಪಿಯಾಗಿದ್ದಾರೆ. ಇನ್ನೂ, ವಿಧಾನಸಭೆ ಚುನಾವಣೆಗೆ ಜನಾರ್ದನ ರೆಡ್ಡಿ ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದ್ದು, ಇದೀಗ ಕೋರ್ಟ್ ಆದೇಶದಿಂದ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.

Similar News