×
Ad

ಚಿಕ್ಕಮಗಳೂರು ಕ್ಷೇತ್ರ: ಸಿ.ಟಿ.ರವಿ ಆಪ್ತರಾಗಿದ್ದ ಎಚ್.ಡಿ.ತಮ್ಮಯ್ಯಗೆ ಮಣೆ ಹಾಕಿದ ಕಾಂಗ್ರೆಸ್

ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ

Update: 2023-04-18 21:19 IST

ಚಿಕ್ಕಮಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 7ಮಂದಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಮಂಗಳವಾರ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಮೂಡಿಸಿದ್ದ ಚಿಕ್ಕಮಗಳೂರು ಕ್ಷೇತ್ರಕ್ಕೆ ಹೈಕಮಾಂಡ್ ಕೊನೆಗೂ ಅಭ್ಯರ್ಥಿ ಹೆಸರು ಘೋಷಿಸಿದೆ. 

ಎರಡು ತಿಂಗಳ ಹಿಂದಷ್ಟೇ ಬಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಸಿ.ಟಿ.ರವಿ ಆಪ್ತರಾಗಿದ್ದ ಎಚ್.ಡಿ. ತಮ್ಮಯ್ಯಗೆ ಟಿಕೆಟ್ ನೀಡಲಾಗಿದೆ. 

ಎಚ್.ಡಿ.ತಮ್ಮಯ್ಯ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕಾಂಗ್ರೆಸ್ ನಾಯಕರು ಹೊಸಮುಖಕ್ಕೆ ಮಣೆ ಹಾಕಿದ್ದಾರೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಗಾಗಿ ಬಿ.ಎಚ್.ಹರೀಶ್, ರೇಖಾ ಹುಲಿಯಪ್ಪಗೌಡ, ಎ.ಎನ್.ಮಹೇಶ್, ಡಾ|ಡಿ.ಎಲ್.ವಿಜಯಕುಮಾರ್ ಹಾಗೂ ನಯಾಜ್ ಅಹಮದ್, ಸತೀಶ್ ಮಹಡಿಮನೆ ಅರ್ಜಿ ಸಲ್ಲಿಸಿದ್ದರು.

ತಮ್ಮಯ್ಯಗೆ ಟಿಕೆಟ್ ನೀಡಲು ಮೂಲ ಕಾಂಗ್ರೆಸ್ಸಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. 'ಅರ್ಜಿ ಹಾಕಿರುವ ಆರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಿ' ಎಂದು ಆಗ್ರಹಿಸಿದ್ದರು. ಇದೀಗ ತೀವ್ರ ವಿರೋಧದ ಮಧ್ಯೆ ಹೈಕಮಾಂಡ್ ತಮ್ಮಯ್ಯಗೆ ಮಣೆ ಹಾಕಿದೆ. 

ಮೂರು ಪಟ್ಟಿಗಳಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡದೇ ಇದ್ದರಿಂದ ಯಾರು ಅಭ್ಯರ್ಥಿ ಎಂಬ ಕುತೂಹಲ ಮೂಡಿಸಿತ್ತು. ಅಂತು ಕುತೂಹಲಕ್ಕೆ ತೆರೆ ಬಿದ್ದಿದೆ.

ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎಚ್.ಡಿ.ತಮ್ಮಯ್ಯ ಸಿ.ಟಿ.ರವಿ ಅವರಿಗೆ ಆಪ್ತರಾಗಿದ್ದರು. ನಗರಸಭೆ ಅಧ್ಯಕ್ಷ ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ನಿರ್ವಹಿಸಿದ್ದರು. ಈ ಬಾರೀ ಬಿಜೆಪಿಯಿಂದ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಬಿಜೆಪಿ ಅವರ ಮನವಿಯನ್ನು ಪರಿಗಣಿಸ ದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ: ಮಂಗಳೂರು ಉತ್ತರ ಇನ್ನೂ ಸಸ್ಪೆನ್ಸ್

Similar News