×
Ad

ವಿಧಾನಸಭೆ ಚುನಾವಣೆ: ಲಕ್ಷ್ಮಣ ಸವದಿ, ಆರ್.ಅಶೋಕ್ ಸೇರಿ ಮಂಗಳವಾರ 621 ಮಂದಿಯಿಂದ 770 ನಾಮಪತ್ರ ಸಲ್ಲಿಕೆ

Update: 2023-04-18 21:57 IST

ಬೆಂಗಳೂರು, ಎ. 18: ವಿಧಾನಸಭೆ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಚಿವರು, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ರಾಜಕೀಯ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳು ಮಂಗಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಝಮೀರ್ ಅಹ್ಮದ್ ಖಾನ್, ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ವೈಎಸ್‍ವಿ ದತ್ತ ಸೇರಿದಂತೆ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪಕ್ಷೇತರರು-206, ಬಿಜೆಪಿ-130, ಕಾಂಗ್ರೆಸ್-116, ಜೆಡಿಎಸ್-75, ಎಎಪಿ-61, ಬಿಎಸ್‍ಪಿ-20 ಸೇರಿದಂತೆ 57 ಮಂದಿ ಮಹಿಳೆಯರು, 564 ಮಂದಿ ಪುರುಷರು ಸೇರಿದಂತೆ ಒಟ್ಟು 621 ಮಂದಿ ಅಭ್ಯರ್ಥಿಗಳು ಒಟ್ಟಾರೆ 770 ನಾಮಪತ್ರಗಳನ್ನು ಮಂಗಳವಾರ ಸಲ್ಲಿಕೆ ಮಾಡಿದ್ದಾರೆ.

ಕನಕಪುರ ಕ್ಷೇತ್ರದಿಂದ ಬಿಜೆಪಿಯಿಂದ ಆರ್.ಅಶೋಕ್, ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ, ಕಡೂರು ಕ್ಷೇತ್ರದಿಂದ ಜೆಡಿಎಸ್‍ನ ವೈಎಸ್‍ವಿ ದತ್ತ, ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್, ಬಿಟಿಎಂ ಲೇಔಟ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಲಿಂಗಾರೆಡ್ಡಿ, ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಝಮೀರ್ ಅಹ್ಮದ್ ಖಾನ್ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಎ.20 ಕೊನೆಯದಿನವಾಗಿದ್ದು, ನಾಳೆ(ಎ.19), ನಾಡಿದ್ದು(ಎ.20) ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಎ.21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಎ.24ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನ. ಹೀಗಾಗಿ ಘಟಾನುಘಟಿ ಅಭ್ಯರ್ಥಿಗಳು ನಾಳೆ(ಎ.19) ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.

Similar News