ಕಡೂರು ಕ್ಷೇತ್ರದ JDS ಅಭ್ಯರ್ಥಿಯಾಗಿ ವೈಎಸ್‍ವಿ ದತ್ತ ನಾಮಪತ್ರ ಸಲ್ಲಿಕೆ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸಾಥ್
ಕಡೂರು, ಎ.18: ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ದತ್ತ , ಪ್ರಜ್ವಲ್ ರೇವಣ್ಣ, ಮತ್ತು ಮಾಜಿ ಸಚಿವ ಎಚ್. ಡಿ. ರೇವಣ್ಣ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿದರೆ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ವಾಹನದ ಮೂಲಕವೇ ತಾಲೂಕು ಕಚೇರಿ ತಲುಪಿದರು.
ನಾಮಪತ್ರ ಸಲ್ಲಿಸಿದ ಬಳಿಕ ತಾಲೂಕು ಕಚೇರಿ ಆವರಣದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಮನೆಯ ಮಗನಂತಿರುವ ದತ್ತ ಇಂದು ನಾಮಪತ್ರ ಸಲ್ಲಿಸಿದ್ದಾರೆ, ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ ಅವರಂತಹ ವಾಗ್ಮಿ ಮತ್ತು ಹಿರಿಯರ ಅಗತ್ಯ ವಿಧಾನಸಭೆಗಿದೆ. ಕಡೂರು ವಿಧಾನಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ತಮ್ಮ ಕುಟುಂಬಕ್ಕೆ ಬಿಡಿಸಲಾಗದ ನಂಟಿದೆ. ನೀವು ನನ್ನನ್ನು ಎರಡು ಬಾರಿ ಲೋಕಸಭೆಗೆ ಕಳುಹಿಸಿದ್ದೀರಿ, ಆ ಋಣಾನುಬಂಧದಿಂದ ಅನಾರೋಗ್ಯದ ನಡುವೆಯೂ ನಿಮ್ಮನ್ನು ನೋಡಲು ಬಂದಿದ್ದೇನೆ, ದತ್ತ ಅವರ ಮೇಲೆಯೂ ಅಭಿಮಾನ ಇದೇ ರೀತಿ ಮುಂದುವರಿಯಲಿ ಎಂದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ತಾವು ಇಂಧನ ಸಚಿವರಾಗಿದ್ದಾಗ ಮತ್ತು ಲೋಕೋಪಯೋಗಿ ಸಚಿವರಾಗಿದ್ದಾಗ ಮಾಡಿಕೊಟ್ಟಿದ್ದೇನೆ, ಈ ಬಾರಿ ಚುನಾವಣೆಯಲ್ಲಿ ದತ್ತ ಅವರನ್ನು ಬೆಂಬಲಿಸಲು ಮನವಿ ಮಾಡಿದರು. ಸಂಸದ ಪ್ರಜ್ವಲ್ ರೇವಣ್ಣ ಅವರು ದತ್ತ ಅವರ ಪರವಾಗಿ ಮತ ಯಾಚಿಸಿದರು.
ಜೆಡಿಎಸ್ ಮುಖಂಡರುಗಳಾದ ಪ್ರೇಮಕುಮಾರ್, ಬಾವಿಮನೆ ಮಧು, ಮುಬಾರಕ್, ಮೋಹನ್ ಕುಮಾರ್, ಅನ್ವರ್, ಬೋರ್ವೆಲ್ ರಾಜಣ್ಣ, ಎಸ್. ವಿ. ಉಮಾಪತಿ, ಆನಂದ್, ಗೋವಿಂದಸ್ವಾಮಿ ಮುಂತಾದವರು ಇದ್ದರು.
ತಾವು ಮತ್ತು ಎಚ್.ಡಿ. ರೇವಣ್ಣ ಅವರುಗಳು ಮಾಡಿದ ಹಲವಾರು ಕೆಲಸಗಳನ್ನು ಬೆಳ್ಳಿ ಪ್ರಕಾಶ್ ತಮ್ಮದೇ ಅನುದಾನ ಎಂದು ಹೇಳಿಕೊಂಡು ಓಡಾಡುವುದನ್ನು ನಿಲ್ಲಿಸಲಿ. ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಒದಗಿಸಲು ಸಿದ್ಧರಿದ್ದೇವೆ
- ಸಂಸದ ಪ್ರಜ್ವಲ್ ರೇವಣ್ಣ