ವಿಧಾನ ಪರಿಷತ್ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ಘೋಷಿಸಿದ ಆಯನೂರು ಮಂಜುನಾಥ್

Update: 2023-04-19 08:54 GMT

ಶಿವಮೊಗ್ಗ:  ಶಿವಮೊಗ್ಗ ನಗರ  ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಇಂದು ಹುಬ್ಬಳಿಗೆ ತೆರಳಿ ಸಭಾಪತಿ ಹೊರಟ್ಟಿ ಅವರ ಅವರಿಗೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ' ಎಂದು ತಿಳಿಸಿದರು. 

'ನನ್ನ ಮೂಲ‌ ನಿಲುವಿನಲ್ಲಿ ಪದವೀಧರ ಕ್ಷೇತ್ರದ ಮತದಾರರ ಸಲುವಾಗಿ, ಸರ್ಕಾರಿ ಇಲಾಖೆ ನೌಕರರು, ಶಿಕ್ಷಕರು, ಅನುದಾನಿತ,ಅನುದಾನ ರಹಿತ,ವಿಶೇಷವಾಗಿ ಎನ್ ಪಿ ಎಸ್ ವಿಚಾರದಲ್ಲಿ ಶಕ್ತಿ ಮೀರಿ ‌ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ್ದೇನೆ.ಆದರೆ ಹೆಚ್ಚು ಪರಿಣಾಮಕಾರಿಯಾಗಿಲ್ಲ.ನಿಗದಿತ ಫಲಿತಾಂಶ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ವಿಧಾ‌ನ ಸಭೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ' ಎಂದರು.

ಶ್ರಮಿಕ ವರ್ಗದ ಪರವಾಗಿ ವಿಧಾನ ಸಭೆಯಲ್ಲಿ ಹೆಚ್ಚು ಪ್ರಸ್ತಾಪಿಸಲು ನಾನು ವಿಧಾನ ಸಭೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ.ನನ್ನ‌ ಮೇಲೆ ನಂಬಿಕೆ ಇಟ್ಟು  ಶ್ರಮಿಕ ವರ್ಗ ಬೆಂಬಲಿಸುವ ವಿಶ್ವಾಸವಿದೆ ಎಂದರು.

'ಶಿವಮೊಗ್ಗ ನಗರ ಶಾಂತವಾಗಿರಬೇಕು. ಸುಸಂಸ್ಕೃತ, ಸಜ್ಜನಿಕೆಗೆ ಹೆಸರಾಗಿದ್ದ ಶಿವಮೊಗ್ಗ ಅದರ ಪರಂಪರೆಯನ್ನು ಕಳೆದುಕೊಳ್ಳುತ್ತಿದೆ. ಹೆಚ್ಚಾಗುತ್ತಿರುವ ವೈಷಮ್ಯವನ್ನು ತಿಳಿಗೊಳಿಸಬೇಕಾಗಿದೆ. ನಾನು ನಗರದಲ್ಲಿ ಹಾಕಿದ ಫ್ಲೆಕ್ಸ್  ನಂತರ ಹರಕು ಬಾಯಿಗಳು ನಿಯಂತ್ರಣಕ್ಕೆ ಬಂದಿದೆ ಎಂದುಕೊಂಡಿದ್ದೇನೆ. ನನ್ನ ಸೌಹಾರ್ದ ನಿಲುವಿಗೆ ಜನರು ಸಹಕಾರ ಕೊಡುತ್ತಾರೆ ಎಂಬ ನಂಬಿಕೆ ಇದೆ' ಎಂದರು.

'ಶಿವಮೊಗ್ಗಕ್ಕೆ ಕೈಗಾರಿಕೆಗಳು ಬರಲು ಹಿಂದೇಟು ಹಾಕಿವೆ. ಇದಕ್ಕೆ ಶಿವಮೊಗ್ಗದಲ್ಲಿ ನಡೆಯುವ ಅಹಿತಕರ ಘಟನೆಗಳು ಕಾರಣ. ಗ್ಲೊಬಲ್ ಮೀಟಿಂಗ್ ನಲ್ಲಿ ಕೈಗಾರಿಕೋದ್ಯಮಿಗಳು ಶಿವಮೊಗ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ.ಗಲಭೆಗಳು ನಿಯಂತ್ರಣಕ್ಕೆ ಬಂದರೆ ಕೈಗಾರಿಕೆಗಳು ತರಬಹುದು. ಶಿವಮೊಗ್ಗ ಶಾಂತಿಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎಂದರು.

'ನಾನು ಕುಬೇರರ ಎದುರಿಗೆ ಚುನಾವಣೆ ಎದುರಿಸುತ್ತಿದ್ದೇನೆ.ಜನರ ಆಶೋತ್ತರಗಳನ್ನು ಎದುರಿಸುವ ಕೆಲಸ ಮಾಡುತ್ತೇನೆ.ಯಾವುದೇ ಹಣದ ಸಹಾಯವಿಲ್ಲದೆ,ಜಾತಿ ರಹಿತ ಚುನಾವಣೆ ಮಾಡುತ್ತೇನೆ.ಗೆಲ್ಲಿಸುವ ಜವಾಬ್ದಾರಿ ಜನರದ್ದು' ಎಂದರು.

'ಇಂದು ಸ್ಪಷ್ಟ ಚಿತ್ರಣ ಸಿಗಲಿದೆ. ಬಿಜೆಪಿಗೂ ರಾಜೀನಾಮೆ ನೀಡುತ್ತಿದ್ದೇನೆ. ಟಿಕೆಟ್ ಗೋಸ್ಕರ ರಾಜೀನಾಮೆ ನೀಡುತ್ತಿಲ್ಲ.ನಾನು ಹುಟ್ಟಿ ಬೆಳೆದ ಶಿವಮೊಗ್ಗ ನಗರದ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಪಕ್ಷೇತರ ಸ್ಪರ್ಧೆ ಮಾಡಲ್ಲ, ಯಾವುದಾದರೊಂದು ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನಾಯಕರೊಂದಿಗೆ ಚರ್ಚೆ ನಡೆಸುತ್ತೇನೆ. ನಾಳೆ ನಾಮಪತ್ರ ಸಲ್ಲಿಸುತ್ತೇನೆ'

- ಆಯನೂರು ಮಂಜುನಾಥ್

Similar News