ನೀವು ಬ್ಯುಸಿ ಇದ್ರೆ, ನಮ್ಮವರನ್ನು ಕರೆ ತರುವ ವ್ಯಕ್ತಿಯನ್ನು ಸಂಪರ್ಕಿಸಿಕೊಡಿ: ಜೈಶಂಕರ್ ಗೆ ಸಿದ್ದರಾಮಯ್ಯ ತಿರುಗೇಟು

ಸುಡಾನ್‌ನಲ್ಲಿ ಕನ್ನಡಿಗರು ಸಿಲುಕಿರುವ ವಿಚಾರ

Update: 2023-04-19 06:47 GMT

ಬೆಂಗಳೂರು: ಸುಡಾನ್‌ ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದು, ಕನ್ನಡಿಗರು ಸೇರಿದಂತೆ ಭಾರತೀಯರು ಸಂಘರ್ಷ ಪೀಡಿತ ದೇಶದಲ್ಲಿ ಸಿಲುಕಿಕೊಂಡಿದ್ದಾರೆ. 

ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವಂತೆ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ ಗೆ ವಿದೇಶಾಂಗ ಸಚಿವ ಜೈಶಂಕರ್‌ ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದಿದ್ದಾರೆ. ಇದಿಕ್ಕೆ ತನ್ನದೇ ಶೈಲಿಯಲ್ಲಿ ಎದಿರೇಟು ನೀಡಿದ ಸಿದ್ದರಾಮಯ್ಯ ಅವರ ಟ್ವೀಟ್‌ ನೆಟ್ಟಿಗರ ಗಮನ ಸೆಳೆದಿದೆ. 

"ಸುಡಾನ್‌ನಲ್ಲಿರುವ ಹಕ್ಕಿ ಪಿಕ್ಕಿಗಳು ಕಳೆದ ಕೆಲವು ದಿನಗಳಿಂದ ಆಹಾರವಿಲ್ಲದೆ ಸಿಲುಕಿಕೊಂಡಿದ್ದಾರೆ ಮತ್ತು ಅವರನ್ನು ಮರಳಿ ಕರೆತರಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ಗೆ ಪ್ರತಿಕ್ರಿಯಿಸಿದ ಜೈಶಂಕರ್ "ನೀವು ಅವರ ಪರಿಸ್ಥಿತಿಯನ್ನು ರಾಜಕೀಯಗೊಳಿಸುವುದು ಅತ್ಯಂತ ಬೇಜವಾಬ್ದಾರಿಯಾಗಿದೆ. ಚುನಾವಣಾ ಗುರಿಗಾಗಿ ವಿದೇಶದಲ್ಲಿರುವ ಭಾರತೀಯರನ್ನು ಅಪಾಯಕ್ಕೆ ಸಿಲುಕಿಸುವುದನ್ನು ಸಮರ್ಥಿಸಲಾಗುವುದಿಲ್ಲ." ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನೊಂದು ಟ್ವೀಟ್‌ ಮಾಡಿ, "ನಿಮ್ಮ ಟ್ವೀಟ್‌ಗೆ ದಿಗಿಲಾಯಿತು! ಅಲ್ಲಿ ಜೀವಗಳು ಅಪಾಯದಲ್ಲಿದೆ; ರಾಜಕೀಯ ಮಾಡಬೇಡಿ," ಎಂದು ಜೈ ಶಂಕರ್‌ ಸಿದ್ದರಾಮಯ್ಯರನ್ನು ಟೀಕಿಸಿದ್ದರು. 
 
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, “ನೀವು ವಿದೇಶಾಂಗ ವ್ಯವಹಾರಗಳ ಸಚಿವರು ಆಗಿರುವುದರಿಂದ ನಾನು ನಿಮಗೆ ಸಹಾಯಕ್ಕಾಗಿ ಮನವಿ ಮಾಡಿದ್ದೇನೆ. ಆದರೆ ನೀವು ದಿಗಿಲುಗೊಳ್ಳುವುದರಲ್ಲೇ ಬ್ಯುಸಿಯಾಗಿದ್ದರೆ ದಯವಿಟ್ಟು ನಮ್ಮ ಜನರನ್ನು ಮರಳಿ ಕರೆತರಲು ಸಹಾಯ ಮಾಡುವ ವ್ಯಕ್ತಿಯನ್ನು ಸಂಪರ್ಕ ಮಾಡಿಕೊಡಿ. ಮುಂದೆ ನಾವು ನೋಡಿಕೊಳ್ಳುತ್ತೇವೆ” ಎಂದು ಉತ್ತರಿಸಿದ್ದಾರೆ.

Similar News