ಇದೇ ನನ್ನ ಕೊನೇ ಚುನಾವಣೆ, ನಂತರ ಯತೀಂದ್ರ, ಮೊಮ್ಮಗ ಧವನ್ ರಾಕೇಶ್ ಇದ್ದಾರೆ: ಸಿದ್ದರಾಮಯ್ಯ
ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ವಿಪಕ್ಷ ನಾಯಕ
ಮೈಸೂರು,ಎ. 19: ವರುಣಾ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ನಾಮಪತ್ರ ಸಲ್ಲಿಸಿದರು.
ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಂಜನಗೂಡಿನ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ನಂಜನಗೂಡಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ನಮ್ಮೊಂದಿಗೆ ಕೈಜೋಡಿಸಿ' ಎಂದು ಮನವಿ ಮಾಡಿದರು.
''ಇದೇ ನನ್ನ ಕೊನೇ ಚುನಾವಣೆ. ನನ್ನ ನಂತರ ಪುತ್ರ ಯತೀಂದ್ರ, ಮೊಮ್ಮಗ ಧವನ್ ರಾಕೇಶ್ (ರಾಕೇಶ್ ಪುತ್ರ) ಇದ್ದಾರೆ'' ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಜನರು ಹರ್ಷೋದ್ಗಾರ ಮಾಡಿದರು.
'ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೊ ಅಷ್ಟೇ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸತ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರುಣಾ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡಬೇಕು ಎಂದಿದ್ದಾರೆ. ನಾಲ್ಕು ವರ್ಷ ಅಧಿಕಾರದಲ್ಲಿದ್ದ ಇವರಿಗೆ ಏಕೆ ತಾಲೂಕು ಕೇಂದ್ರ ಮಾಡಲು ಆಗಲಿಲ್ಲ' ಎಂದು ಪ್ರಶ್ನಿಸಿದರು.
'ನನ್ನ ಎದುರಾಳಿ ವಿ.ಸೋಮಣ್ಣ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ವರುಣಾ ಕ್ಣೇತ್ರಕ್ಕೆ ಎಷ್ಟು ಮನೆ ಕೊಟ್ಟರು? ಬರೀ ಸುಳ್ಳುಗಳನ್ನು ಹೇಳುವುದೇ ಇವರ ಅಜೆಂಡಾವಾಗಿದೆ' ಎಂದು ಕಿಡಿಕಾರಿದರು.
'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯನಿಟ್ ಉಚಿತ ವಿದ್ಯುತ್ ನೀಡಲಿದೆ. ಮನೆಯ ಯಜಮಾನಿಗೆ 2 ಸಾವಿರ ರೂ. ಪ್ರತಿ ಬಡವರಿಗೆ ಹತ್ತು ಕೆ.ಜಿ. ಅಕ್ಕಿ, ನಿರುದ್ಯೋಗ ವಿದ್ಯಾವಂತ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಡಿಪ್ಲೊಮಾ ಪದವೀಧರರಿಗೆ ಒಂದು ವರೆ ಸಾವಿರ ರೂ. ನೀಡುತ್ತೇವೆ' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಸಿ. ಮಹದೇವಪ್ಪ, ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಮುನಿಯಪ್ಪ, ಪುತ್ರ ಯತೀಂದ್ರ, ಮೊಮ್ಮಗ ಧವನ್ ರಾಕೇಶ್ ಸೇರಿದಂತೆ ಮೈಸೂರು ಜಿಲ್ಲೆಯ ಸ್ಥಳಿಯ ಮುಖಂಡರು, ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.