ಲಿಂಗಾಯತ ಸಮುದಾಯದವರನ್ನು ಬಿಜೆಪಿ ಬಳಸಿ ಬಿಸಾಡುತ್ತಿದೆ: ಎಂ.ಬಿ.ಪಾಟೀಲ್ ಆಕ್ರೋಶ
ಹುಬ್ಬಳ್ಳಿ, ಎ. 19: ‘ಬಿಜೆಪಿ, ಲಿಂಗಾಯತ ಸಮುದಾಯದ ಮೇಲೆ ದ್ವೇಷ ಸಾಧಿಸುತ್ತಿದ್ದು, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರನ್ನು ಉಪಯೋಗಿಸಿ ಬಿಸಾಡಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್‍ಗೆ ಟಿಕೆಟ್ ನಿರಾಕರಿಸಲು ಸಮರ್ಪಕ ಕಾರಣ ನೀಡಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ ಟಿಕೆಟ್ ನೀಡಿದೆ. ಜನಸಂಘದಿಂದ ಅವರ ರಾಜಕಾರಣ ಆರಂಭಗೊಂಡಿತ್ತು. ಟಿಕೆಟ್ ನಿರಾಕರಿಸಿದ್ದು, ಸಮುದಾಯಕ್ಕೆ ಮಾಡಿದ ಅಪಮಾನ’ ಎಂದು ಟೀಕಿಸಿದರು.
‘ಯಡಿಯೂರಪ್ಪರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ ಗೆ ಅನ್ಯಾಯ ಮಾಡಲಾಗಿದೆ. ಇದೊಂದು ದೊಡ್ಡ ಅಪಮಾನ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡುತ್ತಿದೆ. ಮುಂದಿನ ಸರದಿ ಬಸವರಾಜ ಬೊಮ್ಮಾಯಿ ಅವರದ್ದು, ಅವರನ್ನು ಮೂಲೆಗುಂಪು ಮಾಡುವುದು ನಿಶ್ಚಿತ ಎಂದು ನುಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆಯೆ ಬಿಜೆಪಿ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ. ಲಿಂಗಾಯಿತ ಸಮುದಾಯದ ಪರವಾಗಿ ಮಾತನಾಡ್ತಿದ್ದೇನೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ. ಬ್ರಾಹ್ಮಣರು ಕೆಟ್ಟವರು ಎಂದು ಹೇಳುವುದಿಲ್ಲ. ಆದರೆ, ಕೆಲವರು ಕೆಟ್ಟದ್ದನ್ನು ಮಾಡಿದರೆ ಮಾತನಾಡುವುದು ಅನಿವಾರ್ಯ ಎಂದು ಅವರು ತಿಳಿಸಿದರು.