ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನ: ಇಂದು 935 ಮಂದಿಯಿಂದ 1,110 ಉಮೇದುವಾರಿಕೆ ಸಲ್ಲಿಕೆ
ಶಿಗ್ಗಾಂವ್‍ನಿಂದ ಬೊಮ್ಮಾಯಿ, ವರುಣಾದಿಂದ ಸಿದ್ದರಾಮಯ್ಯ ನಾಮಪತ್ರ
ಬೆಂಗಳೂರು, ಎ. 19: ರಾಜ್ಯ ವಿಧಾನಸಭೆ ಚುನಾವಣೆ ಕಾವೇರುತ್ತಿರುವ ಬೆನ್ನಲ್ಲೆ ಶಿಗ್ಗಾಂವ್ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ, ಅತ್ತ ವರುಣಾ ಕ್ಷೇತ್ರದಿಂದ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚುನಾವಣೆ ನಾಮಪತ್ರ ಸಲ್ಲಿಕೆಗೆ ನಾಳೆ(ಎ.20)ಯೇ ಕೊನೆಯ ದಿನವಾಗಿದ್ದು, ಆಡಳಿತಾರೂಢ ಬಿಜೆಪಿ ಶಿವಮೊಗ್ಗ ನಗರ ಹಾಗೂ ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ. ಪ್ರತಿಪಕ್ಷ ಕಾಂಗ್ರೆಸ್ ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.
ಪಕ್ಷೇತರರು-359, ಬಿಜೆಪಿ-164, ಕಾಂಗ್ರೆಸ್-147, ಜೆಡಿಎಸ್-108, ಎಎಪಿ-91, ಬಿಎಸ್‍ಪಿ-46 ಸೇರಿದಂತೆ 873 ಪುರುಷ ಹಾಗೂ 62 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 935 ಮಂದಿ ಅಭ್ಯರ್ಥಿಗಳು ಒಟ್ಟಾರೆ 1,110 ನಾಮಪತ್ರಗಳನ್ನು ಇಂದು(ಎ.19) ಸಲ್ಲಿಕೆ ಮಾಡಿದ್ದಾರೆ.
ನಾಳೆ(ಎ.20) ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾಗಿದ್ದು, ಎ.21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎ.24ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕಡೆಯದಿನ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.