ಆಸ್ತಿ ವಿವರ ಘೋಷಿಸಿದ ಬಿ.ವೈ.ವಿಜಯೇಂದ್ರ

Update: 2023-04-19 16:58 GMT

ಬಿ.ವೈ.ವಿಜಯೇಂದ್ರ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬುಧವಾರದಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ಅವರು ಮತ್ತು ಅವರ ಪತ್ನಿ ಪ್ರೇಮಾ ವಿಜಯೇಂದ್ರ  ಒಟ್ಟು 126.18 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದು, 1.75ಲಕ್ಷ ರೂ.ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಹೊಂದಿದ್ದಾರೆ. ಆದರೆ, ದಂಪತಿಗೆ ಒಂದೇ ಒಂದು ಸ್ವಂತ ಕಾರು ಇಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಡ್‍ನಲ್ಲಿ ತಿಳಿಸಿದ್ದಾರೆ.

ವಿಜಯೇಂದ್ರ ಅವರು 6.42ಲಕ್ಷ ರೂ.ನಗದನ್ನು ಹಾಗೂ ಅವರ ಪತ್ನಿ 3.25ಲಕ್ಷ ರೂ. ನಗದನ್ನು ಹೊಂದಿದ್ದಾರೆ. ವಿಜಯೇಂದ್ರ 46.82ಕೋಟಿ ರೂ.ಮೌಲ್ಯದ ಚರಾಸ್ತಿಯನ್ನು ಹಾಗೂ ಅವರ ಪತ್ನಿ 7.85 ಕೋಟಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಇನ್ನು ಈ ದಂಪತಿ ಬಳಿ ಪ್ರಸ್ತುತ 70.11 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಇದೆ. 2021-22ರ ಪ್ರಕಾರ ವಿಜಯೇಂದ್ರ ಅವರ ವಾರ್ಷಿಕ ಆದಾಯವು 1.25 ಕೋಟಿ ರೂ. ಆಗಿದ್ದು, ಅವರ ಪತ್ನಿಯ ವಾರ್ಷಿಕ ಆದಾಯ 30.88 ಲಕ್ಷ ರೂ.ಗಳಾಗಿವೆ. ವಿಜಯೇಂದ್ರ ಅವರು 18.14ಕೋಟಿ ರೂ.ಸಾಲವನ್ನು ಹೊಂದಿದ್ದರೆ, ಅವರ ಪತ್ನಿ 16.37 ಕೋಟಿ ರೂ.ಸಾಲ ಹೊಂದಿದ್ದಾರೆ. 

ದಂಪತಿ ಬಳಿ ಒಟ್ಟು 2.29 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇವೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಇದ್ದರೆ, ಅವರ ಪತ್ನಿ 1.25 ಕೆಜಿ ಚಿನ್ನಾಭರಣಗಳನ್ನು ಹೊಂದಿದ್ದಾರೆ.

ಶಿಕಾರಿಪುರದಲ್ಲಿ ಕೃಷಿ ಭೂಮಿ, ದೊಡ್ಡಬಳ್ಳಾಪುರ, ರಾಮನಗರ, ಶಿಕಾರಿಪುರ, ಶಿವಮೊಗ್ಗ, ಕಲಬುರಗಿ ಮತ್ತು ಬೆಂಗಳೂರಿನಲ್ಲಿ ಕೃಷಿಯೇತರ ಭೂಮಿ ಹೊಂದಿದ್ದಾರೆ. ಹಾಗೇ ಏಳು ಮನೆಗಳನ್ನು ಹೊಂದಿದ್ದಾರೆ. ಇನ್ನು ತಮ್ಮ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ಅಫಿಡವಿಟ್‍ನಲ್ಲಿ ಘೋಷಿಸಿಕೊಂಡಿದ್ದಾರೆ. ಲಂಚ ಆರೋಪದ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದರೆ, ಮತ್ತೊಂದು ಪ್ರಕರಣ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ ಎಂಂದು ಅಫಿಡೆವಿಟ್‍ನಲ್ಲಿ ತಿಳಿಸಿದ್ದಾರೆ.

Similar News