ದುರಹಂಕಾರದಿಂದ ದೇವೇಗೌಡ ಕುಟುಂಬದ ವಿರುದ್ಧ ಧ್ವೇಷ ಸಾಧಿಸಲು ಹೊರಟಿದ್ದಾರೆ: ಸುಮಲತಾ ವಿರುದ್ಧ ಎಚ್ ಡಿಕೆ ಕಿಡಿ
ಮೂಡಿಗೆರೆ, ಎ.19: ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜನ ಒಂದು ದಿನ ಅಧಿಕಾರದಿಂದ ಇಳಿಸುತ್ತಾರೆ. ನನಗೂ ಅಧಿಕಾರ ಶಾಶ್ವತ ಅಲ್ಲ. ಸುಮಲತಾ ಅವರಿಗೆ 2019ರ ಚುನಾವಣೆಯ ಗುಂಗಿನ ದುರಹಂಕಾರ ಇನ್ನೂ ಕಡಿಮೆಯಾಗಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಮನಗರದಲ್ಲೇ ಸ್ಪರ್ಧಿಸುವುದು ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆಂದು ಅಭಿಮಾನದಿಂದ ಹೇಳಿದ್ದಾರೆ. ಇದಕ್ಕೆ ಸುಮಲತಾ ಅವರು ಮಂಡ್ಯದಲ್ಲಿ ನನಗೆ ಸವಾಲು ಹಾಕಿ ಸ್ಪರ್ಧಿಸಲು ಮುಂದಾಗಿದ್ದಾರೆ. ಸವಾಲು ಹಾಕಿ ಸೆಡ್ಡು ಹೊಡೆಯುತ್ತಾರೆ ಎಂದರೆ ಅವರಿಗೆ ದೇವೇಗೌಡ ಅವರ ಕುಟುಂಬದ ಮೇಲೆ ಧ್ವೇಷ ಸಾಧನೆಗೆ ಮುಂದಾಗಿರುವುದು ಸ್ಪಷ್ಟ. ಸುಮಲತಾ ಅವರು ಈಗ ಭಾರೀ ದೊಡ್ಡವರು, ತುಂಬಾ ಬೆಳೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಸುಮಲತಾ ಅಂಬರೀಶ್ ಅವರು 2019ರ ಚುನಾವಣೆಯ ಗುಂಗಿನಿಂದ ಇನ್ನೂ ಹೊರಬಾರದಿರುವುದು ವಿಪರ್ಯಾಸ. ಅಂದು ಅವರು ದೇವೇಗೌಡ ಅವರ ಕುಟುಂಬದ ಯುವಕನನ್ನು ಸೋಲಿಸಿ ಜೆಡಿಎಸ್ ಕೋಟೆಯನ್ನು ಛಿದ್ರ ಮಾಡಿದ್ದಾರೆ. ಸುಮಲತಾ ಅವರು ಅದೇ ಗುಂಗಿನಿಂದ, ದುರಹಂಕಾರದಿಂದ ನನಗೆ ಸವಾಲು ಹಾಕುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಜನ ಒಂದು ದಿನ ಎಲ್ಲ ಅಧಿಕಾರವನ್ನೂ ಕಸಿದುಕೊಳ್ಳುತ್ತಾರೆಂಬುದನ್ನು ಅವರು ಅರಿತಿರಬೇಕು ಎಂದರು.
ಸೋಲು ಗೆಲುವು ಎಲ್ಲರಿಗೂ ಇದ್ದದ್ದೆ. ಈಗ ಮಂಡ್ಯದಲ್ಲಾಗುತ್ತಿರುವ ಬೆಳವಣಿಗೆಯಿಂದ ಜೆಡಿಎಸ್‍ಗೆ ಲಾಭ ಆಗಲಿದೆ. ಅಲ್ಲಿನ ಪ್ರಕ್ರಿಯೆ ಪ್ರಕೃತಿ ನಿಯಮ, ಪ್ರಕೃತಿಯ ಸಹಕಾರ ಜೆಡಿಎಸ್‍ಗೆ ಸಿಕ್ಕಿದೆ. ದೇವರು ನಮ್ಮ ಜೊತೆ ಇದ್ದಾನೆ. ಜೆಡಿಎಸ್‍ಗೆ ಅಲ್ಲಿ ಲಾಭ ಆಗಲಿದೆ ಎಂದರು.