ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬಿಜೆಪಿ: ಈಶ್ವರಪ್ಪ ಪುತ್ರನಿಗೆ ಕೈ ತಪ್ಪಿದ ಟಿಕೆಟ್
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಬುಧವಾರ ರಾತ್ರಿ ಪ್ರಕಟಿಸಿದೆ.
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಶಾಸಕರಾಗಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿರುವ ಎಸ್.ಎನ್.ಚನ್ನಬಸಪ್ಪ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇದರಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಪುತ್ರ ಕಾಂತೇಶ್ ಗೆ ಟಿಕೆಟ್ ಕೈ ತಪ್ಪಿದೆ.
ಇತ್ತೀಚೆಗಷ್ಟೇ ಈಶ್ವರಪ್ಪ ಅವರು ಹೈಕಮಾಂಡ್ ಸೂಚನೆ ಮೇರೆಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಇನ್ನು ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಂಸದ ಬಿ.ವಿ. ನಾಯಕ್ ಅವರಿಗೆ ಟಿಕೆಟ್ ನೀಡಿದೆ.
ಈ ಮುಂಚೆ ಮೂರು ಹಂತಗಳಲ್ಲಿ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಬಿಜೆಪಿ ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾತ್ರ ಬಾಕಿ ಉಳಿಸಿಕೊಂಡಿತ್ತು. ಇಂದು ರಾತ್ರಿ ಆ ಎರಡು ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಅಭ್ಯರ್ಥಿಗಳ ಪಟ್ಟಿ:
ಮಾನ್ವಿ (ST) - ಬಿ.ವಿ. ನಾಯಕ್
ಶಿವಮೊಗ್ಗ ನಗರ ಕ್ಷೇತ್ರ- ಚನ್ನಬಸಪ್ಪ