ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಹೆಸರಿಲ್ಲ: ಕುತೂಹಲ ಮೂಡಿಸಿದ ಪಕ್ಷದ ನಡೆ

Update: 2023-04-20 07:41 GMT

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಬಿಜೆಪಿ ಆರಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಹೆಸರಿಲ್ಲದೇ ಇರುವುದು ಸಾಕಷ್ಟು ಕುತೂಹಲ ಮೂಡಿಸಿದೆ. 

ತೇಜಸ್ವಿ ಸೂರ್ಯ ಮಾತ್ರವಲ್ಲದೆ ಸಂಸದ ಪ್ರತಾಪ ಸಿಂಹ ಹಾಗೂ ಬಿಎಸ್‌ವೈ ರಾಜಕೀಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಬಿವೈ ವಿಜಯೇಂದ್ರ ಅವರ ಹೆಸರುಗಳು ಕೂಡಾ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. 

ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರ ಹೆಸರು ಬಿಜೆಪಿ ಬುಧವಾರ ಬಿಡುಗಡೆಗೊಳಿಸಿದ 40 ತಾರಾ ಪ್ರಚಾರಕರ ಪಟ್ಟಿಯಲ್ಲಿಲ್ಲ. ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಹಾಗೂ ಕೇಂದ್ರ ಮತ್ತು ರಾಜ್ಯಗಳ ಹಲವು ಹಿರಿಯ ಬಿಜೆಪಿ ನಾಯಕರ ಹೆಸರುಗಳಿವೆ.

ತೇಜಸ್ವಿ ಸೂರ್ಯ ಅವರ ಹೆಸರು ಕೈಬಿಟ್ಟಿರುವುದಕ್ಕೆ ಹೆಚ್ಚಿನ ಮಹತ್ವವೇನೂ ನೀಡಬೇಕಾಗಿಲ್ಲ ಎಂದು ಪಕ್ಷ ಮೂಲಗಳು ತಿಳಿಸಿದೆ ಎಂದು NDTV ವರದಿ ಮಾಡಿದೆ.

ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನವೊಂದರ ಟೇಕ್-ಆಫ್‌ ಮುನ್ನ ತುರ್ತು-ನಿರ್ಗಮನ ದ್ವಾರವನ್ನು ನಿಯಮಕ್ಕೆ ವಿರುದ್ಧವಾಗಿ ತೇಜಸ್ವಿ ಸೂರ್ಯ ತೆರೆದಿದ್ದರೆಂದು ಹಾಗೂ ನಂತರ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದರೆಂಬ ವಿಚಾರ ಸಾಕಷ್ಟು ಸುದ್ದಿಯಾಗಿತ್ತು.

ತೇಜಸ್ವಿ ಸೂರ್ಯ ಅವರು ತಮ್ಮ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ನೀಡುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಷ್ಟೇ ಅಲ್ಲದೆ ತಾರಾ ಪ್ರಚಾರಕರ ಪಟ್ಟಿಯಲ್ಲಿ ಅವರಿಲ್ಲ ಎಂದ ಮಾತ್ರಕ್ಕೆ ಅವರು ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂಬರ್ಥವಲ್ಲ ಎಂದೂ ಅವರು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿಲ್ಲ. ಆದರೆ ಎಲ್ಲಾ ಯುವ  ನಾಯಕರನ್ನು ತಾರಾ ಪ್ರಚಾರಕರ ಪಟ್ಟಿಯಿಂದ ಪಕ್ಷ ಹೊರಗಿರಿಸಿದೆ ಎನ್ನಲಾಗುತ್ತಿದೆ.

Similar News