×
Ad

ನಮ್ಮ ಮನೆಯ 17 ಮತಗಳು ಸಿದ್ದರಾಮಯ್ಯಗೆ ಎಂದ ಯುವಕನಿಗೆ ನಿನ್ನ ಹೆಸರು ಮೊಹಮ್ಮದಾ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ

ಸಂಸದನಿಗೆ ನೆಟ್ಟಿಗರ ತರಾಟೆ

Update: 2023-04-20 16:57 IST

ಬೆಂಗಳೂರು: ಒಂದಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಇದೀಗ ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಟರ್ ನಲ್ಲಿ ಯುವಕನೋರ್ವ ಪ್ರತಾಪ್ ಸಿಂಹ ಅವರ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿ ''ಪ್ರತಾಪಣ್ಣ, ನಮ್ಮ ಮನೆಯ ಎಲ್ಲ 17 ಮತಗಳು ಸಿದ್ದರಾಮಯ್ಯಗೆ''  ಎಂದು ಬರೆದುಕೊಂಡಿದ್ದರು. ಇದಕ್ಕೆ ಕಮೆಂಟ್ ಮಾಡಿರುವ ಪ್ರತಾಪ್ ಸಿಂಹ,  ''17 ವೋಟು? ಅಣ್ಣತಮ್ಮಾ, ನಿನ್ನ ಹೆಸರು ಮೋಹನ್ನಾ ಅಥವಾ ಮಹಮ್ಮದ್ದಾ?'' ಎಂದು ಪ್ರಶ್ನೆ ಮಾಡಿದ್ದಾರೆ. 

ಇದೀಗ ಪ್ರತಾಪ್ ಸಿಂಹ ನೀಡಿರುವ ಪ್ರತಿಕ್ರಿಯೆಗೆ ಹಲವು ಟ್ವಿಟರ್ ಬಳಕೆದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪ್ರಶ್ನೆ ಕೇಳಿದ ಯುವಕ ನಂತರ ಟ್ವೀಟ್ ಡಿಲೀಟ್ ಮಾಡಿದ್ದರೂ, ಅದರ ಸ್ಕ್ರೀನ್‌ಶಾಟ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್ ಆಕ್ರೋಶ: 

ಪ್ರತಾಪ್ ಸಿಂಹ ಅವರು ಯುವಕನ ಪ್ರಶ್ನಗೆ ಉತ್ತರಿಸಿರುವ ಪೋಸ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಕಾಂಗ್ರೆಸ್,  ''ಪ್ರತಾಪ್ ಸಿಂಹ ಅವರೇ, ನಿಮಗೆ ಅರ್ಹತೆ ಇದೆಯೋ ಇಲ್ಲವೋ ಅಂತೂ ನೀವು ಸಂಸದರಾಗಿದ್ದೀರಿ. ಕಡೇ ಪಕ್ಷ ಆ ಜವಾಬ್ದಾರಿ ಅರಿತು ಮಾತನಾಡಿ. ಮಾತೆತ್ತಿದರೆ ಸಂಸ್ಕೃತಿ ಸಂಸ್ಕಾರದ ಪಾಠ ಮಾಡುವ ನಿಮಗೆ ಹಿಂದೂ 'ಅವಿಭಕ್ತ' ಕುಟುಂಬಗಳ ಪರಿಚಯ ಇಲ್ಲದಿರುವುದು ಆಶ್ಚರ್ಯವೇ ಸರಿ. ಅವಿಭಕ್ತ ಕುಟುಂಬಗಳು ನಿಮ್ಮ ಪ್ರಕಾರ ಹಿಂದೂಗಳಲ್ಲವೇ?'' ಎಂದು ಕಿಡಿಕಾರಿದೆ. 

''ಜವಾಬ್ದಾರಿಯುತವಾಗಿ ಮಾತನಾಡಿ ಪ್ರತಾಪ್ ಸಿಂಹ ಅವರೇ, ಬಾಯಿ ತೆರೆದರೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಮತ್ತೇನೂ ಇಲ್ಲ'' ಎಂದು ನೆಟ್ಟಿಗರು ತರಾಟೆಗೆ ತೆಗೆದು ಕೊಂಡಿದ್ದಾರೆ. 

ಹಿಂದೂ ಧರ್ಮದಲ್ಲಿ ಅವಿಭಕ್ತ ಕುಟುಂಬಗಳಿವೆ, ನಮ್ಮ ಮನೆಯಲ್ಲಿ ಕೂಡ 24 ಜನ ಇದ್ದಾರೆ. ನಿಮ್ಮಂತಹ ವ್ಯಕ್ತಿಗಳು ಹಿಂದೂ ಧರ್ಮಕ್ಕೆ ಕಪ್ಪುಚುಕ್ಕೆ ಎಂದು ಟ್ವಿಟರ್ ಬಳಕೆದಾರರು ಸಂಸದ ಪ್ರತಾಪ್ ಸಿಂಹ ವಿರುದ್ಧ ನೆಟ್ಟಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News