×
Ad

ಕಾಂಗ್ರೆಸ್–ರೈತ ಸಂಘ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ನಾಮಪತ್ರ: ಸಾಹಿತಿ ದೇವನೂರು, ನಟ ದರ್ಶನ್ ಸಾಥ್

Update: 2023-04-20 20:35 IST

ಮಂಡ್ಯ, ಎ.20: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್–ರೈತ ಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅಪಾರ ಜನಸ್ತೋಮದ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ಪಾಂಡವಪುರದಲ್ಲಿ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಬೀರಶೆಟ್ಟಹಳ್ಳಿ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ಬಳಿಕ ಬಸ್ ಡಿಪೋವಿನಿಂದ ಮೆರವಣಿಗೆ ಪ್ರಾರಂಭಗೊಂಡಿತು. ಹಸಿರು ಬಾವುಟ ಹಿಡಿದಿದ್ದ ರೈತ ಸಂಘದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಬಾವುಟ ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ದರ್ಶನ್ ಪುಟ್ಟಣ್ಣಯ್ಯ ಪರ ಜಯಘೋಷಣೆ ಕೂಗಿ ಮೆರವಣಿಗೆಯಲ್ಲಿ ಸಾಗಿದರು.

ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಚಿತ್ರನಟ ದರ್ಶನ್ ತೂಗುದೀಪ, ದರ್ಶನ್ ಪುಟ್ಟಣ್ಣಯ್ಯನವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಂತೆ ಪ್ರಚಾರಕ್ಕೆ ಬಂದಿದ್ದೇನೆ. ದರ್ಶನ್ ಪುಟ್ಟಣ್ಣಯ್ಯ ಯೋಗ್ಯವಂತ.  ಆತನ  ಗೆಲುವು ನಿಮ್ಮೆಲ್ಲರ ಗೆಲುವಾಗಿದೆ ಎಂದರು.

ದರ್ಶನ್ ಪುಟ್ಟಣ್ಣಯ್ಯ ನನ್ನ ನಡುವಿನ ಉತ್ತಮ ಸ್ನೇಹಬಾಂಧವ್ಯವಿದೆ. ಉಳುವವನೇ ಭೂಮಿ ಒಡೆಯ ಕಾನೂನಿನ ಸಂಬಂಧವಾಗಿ ಚಿತ್ರ ಮಾಡಲಾಗುತ್ತಿದೆ. ಈ ಚಿತ್ರೀಕರಣಕ್ಕೆ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿ ಶುಭ ಕೋರಿದ್ದಾರೆ. ಚುನಾವಣೆ ವೇಳೆ ಮತ್ತೆ ಪ್ರಚಾರಕ್ಕೆ ಬರುತ್ತೇನೆ ಎಂದು ಅವರು ಹೇಳಿದರು.

ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ನನ್ನ ಬೆಂಬಲಿಸಿ ಸಾವಿರಾರು ಜನರು ಸ್ವಯಂ ಪ್ರೇರಣೆಯಿಂದ ಬಂದಿದ್ದಾರೆ. ನಾನು ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿದ್ದೇನೆ. ಈ ಉತ್ಸವ, ಹುರುಪು ಚುನಾವಣೆಯ ತನಕವೂ ಇರಬೇಕಿದೆ. ನನ್ನ ಗೆಲುವು ಜನರ ಗೆಲುವಾಗಲಿದೆ ಎಂದರು.

ದರ್ಶನ್ ಗೆಲ್ಲಲೇಬೇಕು: ದೇವನೂರು

ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಖ್ಯಾತ ಸಾಹಿತಿ ದೇವನೂರು ಮಹಾದೇವ, ದರ್ಶನ್ ಪುಟ್ಟಣ್ಣಯ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಹಲವು ಕನಸಗಳನ್ನು ಹೊತ್ತು ಅಮೇರಿಕದಿಂದ ಇಲ್ಲಿಗೆ ಬಂದಿದ್ದಾನೆ. ಆತನ ಕನಸು ಚಿಗುರೊಡೆಯಲು ಆತ ಗೆಲ್ಲಲೇ ಬೇಕು ಎಂದು ಆಶಿಸಿದರು.

Similar News