ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

Update: 2023-04-20 16:31 GMT

ಬೆಂಗಳೂರು, ಎ. 20: ಸದಾಕಾಲ ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಸಾಗುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮೌಢ್ಯದ ವಿರುದ್ಧ ಸೆಟೆದು ನಿಂತು ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಮಾವಾಸ್ಯೆ ದಿನವಾದ ಗುರುವಾರದಂದು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಮತ್ತೊಮ್ಮೆ ತಮ್ಮ ವೈಚಾರಿಕ ಚಿಂತನೆಯನ್ನು ಸಾಬೀತುಪಡಿಸಿದ್ದಾರೆ. ನಾಮಪತ್ರ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಜನರನ್ನು ಕರೆತರದೆ, ಮೆರವಣಿಗೆ ನಡೆಸದೆ ಕೇವಲ ಐದು ಜನರೊಂದಿಗೆ ತಹಶೀಲ್ದಾರ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದು, ಈ ಮೂಲಕ ಯಮಕನಮರಡಿ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ.

Similar News