ಜಗದೀಶ್ ಶೆಟ್ಟರ್ ನಿವಾಸಕ್ಕೆ ಸುರ್ಜೆವಾಲಾ ಭೇಟಿ
Update: 2023-04-20 23:59 IST
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ನಗರದ ಬದಾಮಿ ನಗರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಗುರುವಾರ ರಾತ್ರಿ ಭೇಟಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೆವಾಲಾ, 'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 40 ಪರ್ಸೆಂಟ್ ಸರ್ಕಾರ 40 ಸೀಟುಗಳಿಗೆ ಸೀಮಿತವಾಗಲಿದೆ. ಬಿಜೆಪಿ ಲಿಂಗಾಯತ, ಒಕ್ಕಲಿಗ, ದಲಿತ ಸೇರಿದಂತೆ ಹಲವು ಸಮುದಾಯಗಳಿಗೆ ಅವಮಾನ ಮಾಡಿದೆ' ಎಂದು ಆರೋಪಿಸಿದರು.
ಈ ಸಂದರ್ಭಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಚುನಾವಣಾ ಉಸ್ತುವಾರಿ ಪಿ.ವಿ. ಮೋಹನ್, ಎನ್.ಎಚ್. ಕೋನರಡ್ಡಿ, ಮೋಹನ್ ಹಿರೇಮನಿ, ಶ್ರೀಪ್ರಕಾಶ್ ಕ್ಯಾರಕಟ್ಟಿ ಹಾಗೂ ಕಾರ್ಯಕರ್ತರು ಇತರರು ಇದ್ದರು.