ಅಂಡಮಾನ್-ನಿಕೋಬಾರ್‌ನಲ್ಲಿ ಸಿಂಗಾಪುರದ ಸೃಷ್ಟಿಯ ಭ್ರಮೆ

Update: 2023-04-20 18:46 GMT

ಸೆಪ್ಟಂಬರ್ 2020ರಲ್ಲಿ ಯೋಜನೆಯ ನೀಲನಕ್ಷೆ ರೂಪಿಸಲು ಸೂಚಿಸಿದ ಆರು ತಿಂಗಳೊಳಗೆ ಏಕಂ ಇಂಡಿಯಾ ಸಂಸ್ಥೆ ಪೂರ್ವಸಾಧ್ಯತೆ ವರದಿ ನೀಡಿತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ತಜ್ಞ ಮೌಲ್ಯಮಾಪನ ಸಮಿತಿ 2020ರ ಎಪ್ರಿಲ್‌ನಲ್ಲಿ ಪರಿಸರ ಅನುಮತಿ ಪ್ರಕ್ರಿಯೆಯನ್ನು ಆರಂಭಿಸಿತು ಮತ್ತು ಹೈದರಾಬಾದ್ ಮೂಲದ ವಿಮ್ಟಾ ಲ್ಯಾಬ್ಸ್‌ಗೆ ಪರಿಸರ ಪರಿಣಾಮ ವಿಶ್ಲೇಷಣೆ(ಇಐಎ) ವರದಿ ಸಿದ್ಧಗೊಳಿಸಲು ತಿಳಿಸಲಾಯಿತು. ಡಿಸೆಂಬರ್ 2021ರಲ್ಲಿ ಮಂತ್ರಾಲಯವು ಕರಡು ಇಐಎ ವರದಿಯನ್ನು ಜಾಲತಾಣದಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿತು. ಪ್ಯಾನ್ ಕಾರ್ಡ್‌ನಲ್ಲಿ ಸಣ್ಣ ತಿದ್ದುಪಡಿಗೆ ತಿಂಗಳುಗಟ್ಟಲೆ ಕಂಬಗಳನ್ನು ಸುತ್ತಬೇಕಾಗುವ ದೇಶದಲ್ಲಿ 71,000 ಕೋಟಿ ರೂ. ವೆಚ್ಚದ ಭಾರೀ ಯೋಜನೆಯ ಕಡತ ಇಷ್ಟು ಶೀಘ್ರವಾಗಿ ಅನುಷ್ಠಾನ ಹಂತಕ್ಕೆ ಬಂದಿದ್ದು ಕಂಡುಕೇಳರಿಯದ ಘಟನೆ!


ಬೆಂಗಳೂರನ್ನು ‘ಸಿಂಗಾಪುರ’ ಮಾಡುತ್ತೇವೆಂಬ ಘೋಷಣೆ ಈಗ ಹಳೆಯದಾಗಿ ಹೋಗಿದೆ. ಬುದ್ಧಿ ಕಲಿಯದ ಒಕ್ಕೂಟ ಸರಕಾರ ಅಂಡಮಾನ್-ನಿಕೋಬಾರನ್ನು ಸಿಂಗಾಪುರ ಮಾಡುವ ವಿನಾಶಕರ ಪ್ರಯತ್ನಕ್ಕೆ ಕೈಹಾಕಿದೆ. ಅಭಿವೃದ್ಧಿ ಯೋಜನೆಗಳು ಅಗತ್ಯ ಎಂದುಕೊಂಡರೂ, ದ್ವೀಪ ಸಮೂಹದಲ್ಲಿ ಅಭಿವೃದ್ಧಿ ಯೋಜನೆಗೆ ಅನುಮತಿಯಲ್ಲಿನ ವೇಗ ಆಶ್ಚರ್ಯಕ್ಕೆ ಕಾರಣವಾಗಿದೆ.

ಅಂಡಮಾನ್-ನಿಕೋಬಾರ್ ದ್ವೀಪಗಳ ಸಮಗ್ರ ಅಭಿವೃದ್ಧಿ ಯೋಜನೆಯ ಕಲ್ಪನೆ ಮೂಡಿದ್ದು ನೀತಿ ಆಯೋಗಕ್ಕೆ. ಗ್ರೇಟ್ ನಿಕೋಬಾರ್ ದ್ವೀಪದ ಆಗ್ನೇಯ ಕರಾವಳಿಯ ಗಲತಿಯಾ ಕೊಲ್ಲಿಯಲ್ಲಿ ವಾರ್ಷಿಕ 16 ದಶಲಕ್ಷ ಕಂಟೇನರ್ ನಿರ್ವಹಣೆ ಸಾಮರ್ಥ್ಯದ ಅಂತರ್‌ರಾಷ್ಟ್ರೀಯ ಟರ್ಮಿನಲ್-ಬಂದರು, 4,000 ಪ್ರಯಾಣಿಕರ ಸಾಮರ್ಥ್ಯದ ಮಿಲಿಟರಿ-ನಾಗರಿಕ ಬಳಕೆಯ ವಿಮಾನ ನಿಲ್ದಾಣ, 450 ಮೆಗಾವ್ಯಾಟ್ ಸಾಮರ್ಥ್ಯದ ಅನಿಲ್-ಡೀಸೆಲ್/ ಸೌರ ವಿದ್ಯುತ್ ಯೋಜನೆ ಹಾಗೂ 160 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ವಸತಿ ಟೌನ್‌ಶಿಪ್ ನಿರ್ಮಾಣದ ಈ ಯೋಜನೆಯ ಉದ್ದೇಶಿತ ವೆಚ್ಚ 71,000 ಕೋಟಿ ರೂ. ಸೆಪ್ಟಂಬರ್ 2020ರಲ್ಲಿ ಯೋಜನೆಯ ನೀಲನಕ್ಷೆ ರೂಪಿಸಲು ಸೂಚಿಸಿದ ಆರು ತಿಂಗಳೊಳಗೆ ಏಕಂ ಇಂಡಿಯಾ ಸಂಸ್ಥೆ ಪೂರ್ವಸಾಧ್ಯತೆ ವರದಿ ನೀಡಿತು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ತಜ್ಞ ಮೌಲ್ಯಮಾಪನ ಸಮಿತಿ 2020ರ ಎಪ್ರಿಲ್‌ನಲ್ಲಿ ಪರಿಸರ ಅನುಮತಿ ಪ್ರಕ್ರಿಯೆಯನ್ನು ಆರಂಭಿಸಿತು ಮತ್ತು ಹೈದರಾಬಾದ್ ಮೂಲದ ವಿಮ್ಟಾ ಲ್ಯಾಬ್ಸ್‌ಗೆ ಪರಿಸರ ಪರಿಣಾಮ ವಿಶ್ಲೇಷಣೆ(ಇಐಎ) ವರದಿ ಸಿದ್ಧಗೊಳಿಸಲು ತಿಳಿಸಲಾಯಿತು. ಡಿಸೆಂಬರ್ 2021ರಲ್ಲಿ ಮಂತ್ರಾಲಯವು ಕರಡು ಇಐಎ ವರದಿಯನ್ನು ಜಾಲತಾಣದಲ್ಲಿ ಪ್ರಕಟಿಸಿ, ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿತು. ಪ್ಯಾನ್ ಕಾರ್ಡ್‌ನಲ್ಲಿ ಸಣ್ಣ ತಿದ್ದುಪಡಿಗೆ ತಿಂಗಳುಗಟ್ಟಲೆ ಕಂಬಗಳನ್ನು ಸುತ್ತಬೇಕಾಗುವ ದೇಶದಲ್ಲಿ 71,000 ಕೋಟಿ ರೂ. ವೆಚ್ಚದ ಭಾರೀ ಯೋಜನೆಯ ಕಡತ ಇಷ್ಟು ಶೀಘ್ರವಾಗಿ ಅನುಷ್ಠಾನ ಹಂತಕ್ಕೆ ಬಂದಿದ್ದು ಕಂಡುಕೇಳರಿಯದ ಘಟನೆ!

ನೀತಿ ಆಯೋಗದ 58 ಪುಟಗಳ ಮುನ್ನೋಟ ದಾಖಲೆ ಪ್ರಕಾರ, ದ್ವೀಪದ ವಲಯ 1(ಪೂರ್ವ ಕರಾವಳಿ)ರಲ್ಲಿ ಆರ್ಥಿಕ ನಗರ ಮತ್ತು ಆರೋಗ್ಯ ನಗರ, ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಏರೋಸಿಟಿ(ಐಶಾರಾಮಿ ಹೊಟೇಲ್‌ಗಳು-ರೆಸಾರ್ಟ್‌ಗಳು); ವಲಯ 2-ವಿರಾಮ ವಲಯ, ಚಲನಚಿತ್ರೋದ್ಯಮ ನಗರ, ಪ್ರವಾಸೋದ್ಯಮ ವಿಶೇಷ ಆರ್ಥಿಕ ವಲಯ ಹಾಗೂ ವಲಯ 3(ಪಶ್ಚಿಮ ಕರಾವಳಿ)ರಲ್ಲಿ ಪ್ರಕೃತಿ ವಲಯ-ಸೂಪರ್ ಐಶಾರಾಮಿ ಹೊಟೇಲ್/ರೆಸಾರ್ಟ್‌ಗಳು, ವಿಮಾನ ನಿಲ್ದಾಣ ಮತ್ತು ಗ್ರೇಟ್ ನಿಕೋಬಾರ್ ಕರಾವಳಿಯಲ್ಲಿ ಅಂತರ್‌ರಾಷ್ಟ್ರೀಯ ಸರಕುಸಾಗಣೆ ಬಂದರು ಇರಲಿದೆ.

ಫೆಬ್ರವರಿ 4, 2021ರಂದು ಅಂಡಮಾನ್ ನಿಕೋಬಾರ್ ಕೇಂದ್ರಾಡಳಿತ ಪ್ರದೇಶದ ಆದಿವಾಸಿ ಕಲ್ಯಾಣ ನಿರ್ದೇಶನಾಲಯವು ಓಂಗೆ ಆದಿವಾಸಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು ಅಂತಿಮಗೊಳಿಸಿತು. ಸೆಪ್ಟಂಬರ್ 2020ರಲ್ಲಿ ಲಿಟ್ಲ್ ಅಂಡಮಾನ್‌ನ ವಿಭಾಗೀಯ ಅರಣ್ಯಾಧಿಕಾರಿ, ಯೋಜನೆಗೆ ಅರಣ್ಯ ನೀಡುವಿಕೆಯಿಂದ 20 ಲಕ್ಷಕ್ಕೂ ಅಧಿಕ ಮರಗಳು ನಾಶವಾಗಲಿದ್ದು, ಸರಿಪಡಿಸಲಾಗದ ನಷ್ಟ ಉಂಟಾಗಲಿದೆ. ಯೋಜನೆ ಪ್ರದೇಶದಲ್ಲಿ 24 ಲಕ್ಷ ಮರಗಳಿವೆ ಎಂದು ಟಿಪ್ಪಣಿ ಬರೆದಿದ್ದರು. ಸುಪ್ರೀಂ ಕೋರ್ಟ್ ಆದೇಶದನ್ವಯ 2002ರಿಂದ ಲಿಟ್ಲ್ ಅಂಡಮಾನ್‌ನಲ್ಲಿ ಮರ ಕುಯ್ಯುವ ಕಾರ್ಖಾನೆಗಳನ್ನು ಮುಚ್ಚಲಾಗಿದೆ.

ವಿಶಿಷ್ಟ ಪರಿಸರ ವ್ಯವಸ್ಥೆ

ಅಂಡಮಾನ್- ನಿಕೋಬಾರ್ ದ್ವೀಪಗಳು ಒಂದು ದಿನದಲ್ಲಿ ಆದಂಥವಲ್ಲ. ಇಲ್ಲಿನ ಆದಿವಾಸಿಗಳು ಸುಮಾರು 50,000 ವರ್ಷಗಳ ಹಿಂದೆ ಆಫಿಕಾದಿಂದ ವಲಸೆ ಬಂದು ನೆಲೆಸಿದವರು. ಬ್ರಿಟಿಷ್ ವಸಾಹತುಶಾಹಿ ಹಾಗೂ ಸ್ವಾತಂತ್ರ್ಯಾನಂತರ ಹಲವು ಬಾರಿ ಇವರನ್ನು ಸ್ಥಳಾಂತರಿಸಲಾಗಿದೆ. ಈ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಪೋರ್ಟ್‌ಬ್ಲೇರ್, ಚೆನ್ನೈಯಿಂದ 1,190 ಕಿ.ಮೀ. ದೂರದಲ್ಲಿದೆ. ದ್ವೀಪ ಸಮೂಹದ ಒಟ್ಟು ವಿಸ್ತೀರ್ಣ 8,250 ಚದರ ಕಿ.ಮೀ. ಎರಡೂ ದ್ವೀಪಗಳ ನಡುವೆ 100 ಕಿ.ಮೀ. ಅಂತರವಿದ್ದು, ದ್ವೀಪಗಳನ್ನು ಟೆನ್ ಡಿಗ್ರಿ ಚಾನೆಲ್ ಪ್ರತ್ಯೇಕಿಸುತ್ತದೆ. ಇದು 572 ದ್ವೀಪಗಳ ಗುಚ್ಛ; ಆದರೆ, ಜನವಸತಿ ಇರುವುದು 38ರಲ್ಲಿ ಮಾತ್ರ. ಅಂಡಮಾನ್ ದ್ವೀಪ ಗುಚ್ಛದಲ್ಲಿ 325 ಹಾಗೂ ನಿಕೋಬಾರ್ ಗುಚ್ಛದಲ್ಲಿ 247 ದ್ವೀಪಗಳಿವೆ. ಹೆವ್ಲಾಕ್, ರಾಸ್, ನೀಲ್ ಇತ್ಯಾದಿ ನೂರಾರು ದ್ವೀಪಗಳಿವೆ. ಮೂರು ಜಿಲ್ಲೆಗಳಿದ್ದು, ನಿಕೋಬಾರ್ ಜಿಲ್ಲೆ(ಮುಖ್ಯ ಕೇಂದ್ರ ಕಾರ್‌ನಿಕೋಬಾರ್), ದಕ್ಷಿಣ ಅಂಡಮಾನ್ ಜಿಲ್ಲೆ(ಮುಖ್ಯ ಕೇಂದ್ರ ಪೋರ್ಟ್ ಬ್ಲೇರ್) ಹಾಗೂ ಉತ್ತರ ಮತ್ತು ಮಧ್ಯ ಅಂಡಮಾನ್(ಮುಖ್ಯಕೇಂದ್ರ ಮಾಯಾಬಂದರ್). 1900ರ ಬಳಿಕ ಸಮುದಾಯದ ಸಂಖ್ಯೆ ಕುಸಿದಿದೆ. 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆ 3,80,581. ಲಿಂಗಾನುಪಾತ 876 ಮಹಿಳೆಯರಿಗೆ 1,000 ಪುರುಷರು. ಅಂಡಮಾನ್‌ನಲ್ಲಿ ನಿಗ್ರಿಟೋ ಗುಂಪಿಗೆ ಸೇರಿದ 4 ಮೂಲವಾಸಿಗಳಿದ್ದಾರೆ. ಅವರೆಂದರೆ, ಜನರ ಸಂಪರ್ಕಕ್ಕೆ ಸಿಗದ ಜಾರವಾಗಳು ಮತ್ತು ಸೆಂಟಿನೆಲಿಗಳು(ಜನಸಂಖ್ಯೆ 15), ಗ್ರೇಟ್ ಅಂಡಮಾನೀಸ್(ಜನಸಂಖ್ಯೆ 400-450) ಮತ್ತು ಓಂಗೆಗಳು(ಜನಸಂಖ್ಯೆ 125). ನಿಕೋಬಾರ್‌ನಲ್ಲಿ ಮಂಗೋಲಾಯ್ಡೆ ಗುಂಪಿಗೆ ಸೇರಿದ ನಿಕೋಬಾರಿಗಳು(ಜನಸಂಖ್ಯೆ 27,168), ಶೋಂಪೆನ್(229) ಇದ್ದಾರೆ. ಜಂಗಿಲ್‌ಗಳು ನಿರ್ವಂಶವಾಗಿದ್ದಾರೆ. ಈ ಎಲ್ಲ ಮೂಲವಾಸಿಗಳು ನಿರ್ದಿಷ್ಟ ದುರ್ಬಲ ಆದಿವಾಸಿ ಗುಂಪು(ಪಿಜಿಟಿವಿ, ಪರ್ಟಿಕ್ಯುಲರ್ಲಿ ವಲ್ನರಬಲ್ ಟ್ರೈಬಲ್ ಗ್ರೂಪ್)ಗಳಾಗಿವೆ. ನಿಕೋಬಾರಿಗಳು ನಗರಗಳಲ್ಲಿ ನೆಲೆಯೂರಿದ್ದು, ನಾಗರೀಕರಣಗೊಂಡಿದ್ದಾರೆ.

ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಗೆ ಈಡಾಗಲಿರುವ ಗ್ರೇಟ್ ನಿಕೋಬಾರ್ ದ್ವೀಪದ ಜನಸಂಖ್ಯೆ 8,000. ಲಿಟ್ಲ್ ಅಂಡಮಾನ್‌ನ ಮೂಲವಾಸಿಗಳು ಓಂಗೆಗಳು. ಈ ದ್ವೀಪದ ಕೆಲಭಾಗವನ್ನು 1956-57ರಲ್ಲಿ ಮೂಲವಾಸಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. 1970ರಲ್ಲಿ ಕೆಲ ಪ್ರದೇಶಗಳನ್ನು ಹೊರತುಪಡಿಸಿ, ದಕ್ಷಿಣ ಕೊಲ್ಲಿ ಮತ್ತು ಆಗ್ನೇಯ ಕರಾವಳಿಯ ಡುಗಾಂಗ್ ಕೊಲ್ಲಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. 2004ರ ಸುನಾಮಿಯಿಂದ ದಕ್ಷಿಣ ಕೊಲ್ಲಿ ಹಾನಿಗೀಡಾದಾಗ, ಅಲ್ಲಿದ್ದ ಓಂಗೆಗಳನ್ನು ಡುಗಾಂಗ್ ಕೊಲ್ಲಿಗೆ ಸ್ಥಳಾಂತರಿಸಲಾಯಿತು. ಯೋಜನೆಯಿಂದಾಗಿ ಓಂಗೆ ಆದಿವಾಸಿ ಸಂರಕ್ಷಿತ ಪ್ರದೇಶ 450 ಚದರ ಕಿ.ಮೀ.ನಿಂದ 140 ಚದರ ಕಿ.ಮೀ.ಗೆ ಕುಸಿಯಲಿದೆ. ದಕ್ಷಿಣ ಕೊಲ್ಲಿಯ ಹರ್ಮಿಂದರ್ ಕೊಲ್ಲಿಯಲ್ಲಿ ನಿಕೋಬಾರಿಗಳನ್ನು ಇರಿಸಲಾಗಿದೆ(1970ರಲ್ಲಿ).

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದ ತಡೆ

ಗ್ರೇಟ್ ನಿಕೋಬಾರ್ ದ್ವೀಪ ಯೋಜನೆಗೆ ಎಪ್ರಿಲ್ 2023ರಲ್ಲಿ ತಡೆ ನೀಡಿರುವ ಎನ್‌ಜಿಟಿ, ಪರಿಸರ ಅನುಮತಿಯನ್ನು ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಿದೆ. ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಎ.ಕೆ. ಗೋಯಲ್, ಸದಸ್ಯರಾದ ನ್ಯಾಯಮೂರ್ತಿಗಳಾದ ಸುಧಾಕರ್ ಅಗರ್ವಾಲ್, ಬಿ. ಅಮಿತ್ ಸ್ಥಲೇಕರ್ ಮತ್ತು ಅರುಣ್‌ಕುಮಾರ್ ತ್ಯಾಗಿ ಪೀಠದಲ್ಲಿದ್ದರು. ಯೋಜನೆಗೆ ನೀಡಿದ ಪರಿಸರ ಅನುಮತಿ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ಎನ್‌ಜಿಟಿ ಜನವರಿ 11, 2023ರಂದು ಸೂಚಿಸಿತ್ತು. ‘ಹವಳ ದಿಬ್ಬಗಳು, ಸದಾ ಹಸಿರು ಕಾಡುಗಳು, ಮ್ಯಾಂಗ್ರೋವ್ ಕಾಡುಗಳು, ಆಮೆ/ಹಕ್ಕಿಗಳ ಮೊಟ್ಟೆಯಿಡುವ ತಾಣಗಳು, ಅವಘಡ ನಿರ್ವಹಣೆ, ಸವಕಳಿ ಇತ್ಯಾದಿ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕು. 2019ರ ದ್ವೀಪ ಕರಾವಳಿ ನಿಯಂತ್ರಣ ವಲಯ(ಐಸಿಆರ್‌ಝಡ್) ಅಧಿಸೂಚನೆಯನ್ನು ಪಾಲಿಸಬೇಕು ಹಾಗೂ ಆದಿವಾಸಿ ಹಕ್ಕುಗಳ ಸಂರಕ್ಷಣೆ ಮತ್ತು ಪುನರ್ವಸತಿಯನ್ನು ಖಾತ್ರಿಗೊಳಿಸಬೇಕು’ ಎಂದು ಎನ್‌ಜಿಟಿ ಸೂಚಿಸಿದೆ. ಜನವರಿ 2023ರಲ್ಲಿ ಸರಕಾರ ಹಾಗೂ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಬಂದರು, ಹಡಗು ಸಾಗಣೆ ಮತ್ತು ಜಲ ಮಾರ್ಗಗಳ ಮಂತ್ರಾಲಯ ಹೇಳಿತ್ತು.

ಇಂಥ ಅಧ್ಯಯನಗಳನ್ನು ನಡೆಸಲಾಗಿದೆ ಎಂಬ ಪ್ರತಿವಾದಿಗಳ ಹೇಳಿಕೆಯನ್ನು ನ್ಯಾಯಾಧಿಕರಣ ಮನ್ನಿಸಲಿಲ್ಲ. ‘‘ಅಧ್ಯಯನದಲ್ಲಿ ‘ಉತ್ತರ ಸಿಗದ ಲೋಪಗಳಿವೆ’. ಯೋಜನೆಗೆ ನೀಡಿದ ಪರಿಸರ ಅನುಮತಿಗಳನ್ನು ಹಾಗೂ ನಿವಾಸಿಗಳಿಗೆ ಆಗಬಹುದಾದ ಸಂಭಾವ್ಯ ಹಾನಿಗಳ ಬಗ್ಗೆ ಪರಿಶೀಲಿಸಬೇಕಿದೆ’’ ಎಂದಿತು. ಇಷ್ಟುಮಾತ್ರವಲ್ಲದೆ, ಯೋಜನೆಯ ವಿಪರಿಣಾಮವನ್ನು ಪರಿಶೀಲಿಸಲು ಅಂಡಮಾನ್-ನಿಕೋಬಾರ್‌ನ ಲೆಫ್ಟಿನೆಂಟ್ ಗವರ್ನರ್ ಸಮಿತಿಯೊಂದನ್ನು ರಚಿಸಿದ್ದಾರೆ. ಮಾರ್ಚ್ 2023ರಲ್ಲಿ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಆದಿವಾಸಿ ವ್ಯವಹಾರಗಳ ಸಚಿವ ಬಿಶ್ವೇಶ್ವರ ಟುಡು, ಆದಿವಾಸಿಗಳನ್ನು ಸ್ಥಳಾಂತರಿಸುವುದಿಲ್ಲ ಎಂದಿದ್ದರು. ನವೆಂಬರ್ 2022ರಲ್ಲಿ ಯೋಜನೆಗೆ 130.75 ಚದರ ಕಿ.ಮೀ. ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ಪರಿಸರ-ಅರಣ್ಯ ಮಂತ್ರಾಲಯದಿಂದ ಮೊದಲ ಹಂತದ ಅನುಮತಿ ಲಭ್ಯವಾಯಿತು. ‘‘ಮೂಲವಾಸಿಗಳ ಕಾಯ್ದಿಟ್ಟ ಪ್ರದೇಶವನ್ನು ಬಳಸುವಾಗ ಶೊಂಪೆನ್‌ಗಳ ಹಿತಾಸಕ್ತಿಗೆ ಧಕ್ಕೆಯಾಗಬಾರದು. ಮೂಲವಾಸಿ ಗುಂಪುಗಳ ರಕ್ಷಣೆ(ಪಿಎಟಿ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಮೂಲವಾಸಿಗಳ ಸ್ಥಳಾಂತರ ಕೂಡದು ಮತ್ತು ಪರಿಸರ ಪ್ರವಾಸೋದ್ಯಮವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು’’ ಎಂಬ ಶರತ್ತು ಒಡ್ಡಲಾಯಿತು.

ಜೈವಿಕ ವೈವಿಧ್ಯ ತಾಣ
1989ರಲ್ಲಿ ದ್ವೀಪದ 900 ಚದರ ಕಿ.ಮೀ. ಪ್ರದೇಶವನ್ನು ಜೈವಿಕ ವೈವಿಧ್ಯ ತಾಣವೆಂದು ಘೋಷಿಸಿ, 2013ರಲ್ಲಿ ಯುನೆಸ್ಕೋದ ಮ್ಯಾನ್ ಆ್ಯಂಡ್ ಬಯೋಸ್ಪಿಯರ್ ಕಾರ್ಯಕ್ರಮದಲ್ಲಿ ಸೇರ್ಪಡೆಗೊಳಿಸಲಾಯಿತು. ದ್ವೀಪದ 3/4ಕ್ಕೂ ಅಧಿಕ ಭಾಗ ಅಂಡಮಾನ್-ನಿಕೋಬಾರ್ ದ್ವೀಪಗಳು(ಮೂಲನಿವಾಸಿಗಳ ಸಂರಕ್ಷಣೆ) ತಿದ್ದುಪಡಿ ಕಾಯ್ದೆಯನ್ವಯ ಮೂಲವಾಸಿ ಸಂರಕ್ಷಿತ ಪ್ರದೇಶ. ಇಲ್ಲಿ ಸಿಂಗಾಪುರದ ಅಂತರ್‌ರಾಷ್ಟ್ರೀಯ ಬಂದರಿನೊಟ್ಟಿಗೆ ಸ್ಪರ್ಧಿಸಲಿದೆ ಎಂಬ ಭ್ರಮೆಯ ‘ವಾಣಿಜ್ಯ ಹಬ್’ ನಿರ್ಮಾಣ ‘ಪರಿಸರ ಹತ್ಯಾಕಾಂಡ’ಕ್ಕೆ ಸಮನಾದುದು.

‘ಗ್ರೇಟ್ ನಿಕೋಬಾರ್‌ನಲ್ಲಿನ ಅರಣ್ಯನಾಶಕ್ಕೆ ಪ್ರತಿಯಾಗಿ ಪರಿಹಾರಾತ್ಮಕ ಅರಣ್ಯೀಕರಣವನ್ನು ಹರ್ಯಾಣ ಮತ್ತು ಮಧ್ಯಪ್ರದೇಶದಲ್ಲಿ ಮಾಡಲಾಗುತ್ತದೆ’ ಎಂದು ಇಐಎ ವರದಿ ಹೇಳುತ್ತದೆ. ಆದರೆ, ಅಂಡಮಾನ್-ನಿಕೋಬಾರ್‌ಗೂ ಹರ್ಯಾಣ-ಮಧ್ಯಪ್ರದೇಶಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಅಪಾರ ಜೀವವೈವಿಧ್ಯವುಳ್ಳ ಸದಾ ಹಸಿರು ಅರಣ್ಯಗಳ ನಾಶವನ್ನು ದೂರದಲ್ಲೆಲ್ಲೋ ನಡೆಸುವ ಪರಿಹಾರಾತ್ಮಕ ಅರಣ್ಯೀಕರಣದಿಂದ ಸರಿದೂಗಿಸಬಹುದೇ? ಯೋಜನೆ 4,518 ಹವಳದ ದಿಬ್ಬಗಳನ್ನು ನಾಶಪಡಿಸಲಿದ್ದು, ಅವುಗಳನ್ನು ‘ಸ್ಥಳಾಂತರಿಸುವುದಾಗಿ’ ವರದಿ ಹೇಳುತ್ತದೆ. ಹವಾಮಾನ ವ್ಯತ್ಯಯದಿಂದಾಗಿ ಸಮುದ್ರಗಳು ಬಿಸಿಯಾಗಿ, ಹವಳ ದಿಬ್ಬಗಳು ಎಲ್ಲೆಡೆ ಅಪಾಯಕ್ಕೆ ಸಿಲುಕಿವೆ. ಇಂಥ ಸನ್ನಿವೇಶದಲ್ಲಿ ಸ್ಥಳಾಂತರದಿಂದ ಅವು ಉಳಿಯುವ ಸಾಧ್ಯತೆ ಕಡಿಮೆ ಮತ್ತು ಬಣ್ಣ ಕಳೆದುಕೊಳ್ಳುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ. ಲಂಡನ್ ಮೂಲದ ಆದಿವಾಸಿ ಹಕ್ಕುಗಳ ಸಂಘಟನೆ ಸರ್ವೈವಲ್ ಇಂಟರ್‌ನ್ಯಾಷನಲ್ ‘ಯೋಜನೆ ಆತ್ಮಹತ್ಯಾತ್ಮಕ’ ಎಂದಿದೆ. ವಿಶ್ವಸಂಸ್ಥೆಯ ತಾರತಮ್ಯ ನಿವಾರಣೆ ಸಮಿತಿ(ಸಿಇಆರ್‌ಡಿ) ಎಪ್ರಿಲ್ 29, 2022ರಂದು ಬರೆದ ಪತ್ರದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದೆ. ‘‘ಯೋಜನೆಯು ಐದು ಆದಿವಾಸಿ ಗುಂಪುಗಳಾದ ಗ್ರೇಟ್ ಅಂಡಮಾನೀಸ್, ಜಾರವಾ, ಓಂಗೆ, ಶೊಂಪೇನ್ ಮತ್ತು ಸೆಂಟಿನೆಲಿಗಳ ಮೇಲೆ ವಿನಾಶಕರ ಆಘಾತ ಉಂಟುಮಾಡಲಿದೆ. ಭಾರೀ ಅಭಿವೃದ್ಧಿ ಯೋಜನೆಗಳ ಬದಲು ಆದಿವಾಸಿ ಹಕ್ಕುಗಳಿಗೆ ಆದ್ಯತೆ ನೀಡಬೇಕೆಂಬ ಶೊಂಪೇನ್ ಕಾರ್ಯನೀತಿ(2015), ಅರಣ್ಯ ಸಂರಕ್ಷಣೆ ಕಾಯ್ದೆ 1980, ಅಂಡಮಾನ್-ನಿಕೋಬಾರ್ ದ್ವೀಪಗಳ ಆದಿವಾಸಿ ಗುಂಪುಗಳ ನಿಯಮ 1956 ಹಾಗೂ ಅರಣ್ಯ ಕಾಯ್ದೆ 1927ನ್ನು ಉಲ್ಲಂಘಿಸುತ್ತದೆ’’ ಎಂದು ಹೇಳಿದೆ.

ಕಾಡು, ಆಮೆಗೆ ಕುತ್ತು

ಗ್ರೇಟ್ ನಿಕೋಬಾರ್‌ನಲ್ಲಿ ಚರಿತ್ರೆಪೂರ್ವ ಕಾಲದ ಅಂದಾಜು 8.52 ಲಕ್ಷ ಮರಗಳನ್ನು ಕತ್ತರಿಸಬೇಕಾಗುತ್ತದೆ. ಮರಗಳು ಇಂಗಾಲವನ್ನು ಹೀರಿಕೊಳ್ಳುತ್ತವೆ ಮತ್ತು ಅರಣ್ಯನಾಶದಿಂದ ಇಂಗಾಲ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತದೆ. ಅಂಡಮಾನ್-ನಿಕೋಬಾರ್‌ನಲ್ಲಿರುವ ಜೈಂಟ್ ಲೆದರ್‌ಬ್ಯಾಕ್ ಆಮೆ(ಬೆನ್ನಿನ ಮೇಲೆ ಮೂಳೆಯ ಚಿಪ್ಪಿನ ಬದಲು ಚರ್ಮವನ್ನು ಹೋಲುವ ಚಿಪ್ಪುಹೊಂದಿರುತ್ತದೆ) ಹಾಗೂ ಡುಗಾಂಗ್(ಸಸ್ಯಾಹಾರಿ ಸಸ್ತನಿ, ಸಮುದ್ರಜೀವಿ)ಗಳ ಉಳಿವಿಗೆ ಧಕ್ಕೆ ಬರುತ್ತದೆ. ಆರು ಅಡಿ ಉದ್ದ ಮತ್ತು ಅಂದಾಜು ಒಂದು ಟನ್ ತೂಗಬಲ್ಲ ಲೆದರ್‌ಬ್ಯಾಕ್ ಆಮೆ, ಜಗತ್ತಿನ ಅತ್ಯಂತ ದೊಡ್ಡ ಆಮೆ. ಮಲೇಶ್ಯ, ಕೋಸ್ಟರಿಕಾ ಮತ್ತು ಪೂರ್ವ ಪೆಸಿಫಿಕ್‌ನಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಜನವರಿ 19, 2021ರಲ್ಲಿ ರಾಷ್ಟ್ರೀಯ ಸಮುದ್ರ ಆಮೆಗಳ ಕ್ರಿಯಾಯೋಜನೆ ದಾಖಲೆಯ ಮುನ್ನುಡಿಯಲ್ಲಿ ಸಚಿವ ಪ್ರಕಾಶ್ ಜಾವಡೇಕರ್, ‘‘ದೇಶದ ಸಮುದ್ರದಲ್ಲಿ 5 ಪ್ರಭೇದದ ಆಮೆಗಳಿದ್ದು, ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಗ್ರೇಟ್ ನಿಕೋಬಾರ್ ದ್ವೀಪಗಳ ಲೆದರ್‌ಬ್ಯಾಕ್ ಆಮೆಗಳ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸಬೇಕು’’ ಎಂದು ಹೇಳಿದ್ದರು. ಸಮುದ್ರ ಆಮೆಗಳು ಮರಿ ಮಾಡುವ ಕರಾವಳಿ ತೀರಗಳನ್ನು ‘ಸಮುದ್ರ ಜೈವಿಕ ವೈವಿಧ್ಯ ಪ್ರದೇಶ’ ಎಂದು ವರ್ಗೀಕರಿಸಿದ್ದು, ಲಿಟ್ಲ್ ಅಂಡಮಾನ್ ಮತ್ತು ಪಶ್ಚಿಮ ಕೊಲ್ಲಿ ಇದರಲ್ಲಿ ಸೇರಿದೆ. ಪಶ್ಚಿಮ ಕೊಲ್ಲಿಯ 7 ಕಿ.ಮೀ. ಪ್ರದೇಶದಲ್ಲಿ 2004ರ ಸುನಾಮಿ ಬಳಿಕ ಸಮುದ್ರ ಆಮೆ ಕುರಿತು ಸಂಶೋಧನೆ ನಡೆಯುತ್ತಿದ್ದು, ಅರಣ್ಯ ಇಲಾಖೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಇದರಲ್ಲಿ ಭಾಗಿಯಾಗಿವೆ.

ಯೋಜನೆಯಿಂದ ಆಪತ್ತಿಗೆ ಸಿಲುಕಿರುವ ಇನ್ನೊಂದು ಪ್ರಾಣಿ- ಉದ್ದ ಬಾಲದ ಮೆಕಾಕೆ(ಮೆಕಾಕಾ ಫೇಸಿಕ್ಯುಲಾರಿಸ್ ಅಂಬ್ರೋಸಾ); ಆಗ್ನೇಯ ಏಶ್ಯದ ಉದ್ದ ಬಾಲದ ಮೆಕಾಕೆಗಳ ಗುಂಪಿಗೆ ಸೇರಿದ ಅಪಾಯಕ್ಕೆ ಸಿಲುಕಿರುವ ಉಪ ಪ್ರಭೇದ. ಇವು ನಿಕೋಬಾರ್‌ನ ಮೂರು ದ್ವೀಪಗಳಲ್ಲಿ ಕಚಲ್, ಲಿಟ್ಲ್ ನಿಕೋಬಾರ್ ಮತ್ತು ಗ್ರೇಟ್ ನಿಕೋಬಾರ್‌ನಲ್ಲಿ ಮಾತ್ರ ಲಭ್ಯವಿವೆ. ಭೂಮಿಯ ಬಳಕೆಯಲ್ಲಿನ ಬದಲಾವಣೆಯಿಂದಾಗಿ ಮೆಕಾಕೆಗಳು ಮನುಷ್ಯರ ವಾಸಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಪ್ರಸಕ್ತ ಯೋಜನೆಯಿಂದ ಮೆಕಾಕೆಗಳ 36 ಗುಂಪಿನಲ್ಲಿ ಶೇ.70ರಷ್ಟು ತಮ್ಮ ಜೀವಾವಾಸ ನೆಲೆ ಕಳೆದುಕೊಳ್ಳುತ್ತವೆ ಎಂದು 2016ರ ಅಧ್ಯಯನ ಹೇಳಿದೆ. ಅಪಾಯದ ಭೀತಿ ಎದುರಿಸುತ್ತಿರುವ ಇನ್ನೊಂದು ಪ್ರಾಣಿ-ಡುಗಾಂಗ್(ಸಮುದ್ರ ಸಸ್ತನಿ). ತಮಿಳುನಾಡು ಸರಕಾರ ಸೆಪ್ಟಂಬರ್ 2022ರಲ್ಲಿ ತಂಜಾವೂರು ಮತ್ತು ಪುದುಕೋಟೆ ಜಿಲ್ಲೆಗಳ 448 ಚದರ ಕಿ.ಮೀ. ಸಮುದ್ರದಲ್ಲಿ ಡುಗಾಂಗ್ ಸಂರಕ್ಷಿತ ಪ್ರದೇಶವನ್ನು ಘೋಷಿಸಿದೆ.

202 ಕಿ.ಮೀ. ಉದ್ದದ ಕರಾವಳಿ ತೀರವನ್ನು ಹೊಂದಿರುವ ಗ್ರೇಟ್ ನಿಕೋಬಾರ್ ದ್ವೀಪ ಅಪಾಯದಲ್ಲಿದೆ. ಈ ಹಿಂದೆ ಅರಣ್ಯನಾಶ, 2004ರ ಸುನಾಮಿಯಂಥ ಹಲವು ಸ್ವಾಭಾವಿಕ ಅವಘಡಗಳಿಂದ ಅದು ಜೀವ ಉಳಿಸಿಕೊಂಡಿದೆ. ಬಂಗಾಳ ಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ನಡುವೆ ಇರುವ ಈ ದ್ವೀಪದಡಿಯ ಭೂಫಲಕಗಳು ನಿರಂತರ ಚಲನೆಯಲ್ಲಿರುತ್ತವೆ. 2004ರಲ್ಲಿ 33 ಅಡಿ ಎತ್ತರದ ಅಲೆಗಳ ಸುನಾಮಿ ದ್ವೀಪವನ್ನು ಅಪ್ಪಳಿಸಿತ್ತು. 2,000 ಮಂದಿ ಮೃತಪಟ್ಟಿದ್ದು, 40,000 ಮಂದಿ ನೆಲೆ ಕಳೆದುಕೊಂಡರು. ಕಚಲ್ ಮತ್ತು ಇಂದಿರಾ ಪಾಯಿಂಟ್ ತೀವ್ರ ಹಾನಿಗೊಳಗಾಗಿ, 13.9 ಅಡಿ ಕುಸಿದು ಸಮುದ್ರದೊಳಗೆ ವಾಲಿಕೊಂಡಿತು. ಸಾಗರದ ತಳದಿಂದ ಕೋಟ್ಯಂತರ ಟನ್ ಕಲ್ಲುಗಳು ಹೊರಬಂದು, ಸಾಗರದ ತಳ 10-20 ಮೀಟರ್ ಲಂಬವಾಗಿ ಮೇಲೆದ್ದಿತು. ಗ್ರೇಟ್ ನಿಕೋಬಾರ್ ದ್ವೀಪ ಈ ಭೂಕಂಪನ ಕೇಂದ್ರದ ಸನಿಹದಲ್ಲಿದೆ. ಭೂಕಂಪದಿಂದ ಕುಸಿದಿದ್ದ ಗ್ರೇಟ್ ನಿಕೋಬಾರ್‌ನ ಕರಾವಳಿ ತೀರ, ಉಪಗ್ರಹಗಳ ಅಳತೆ ಪ್ರಕಾರ, ಮೊದಲಿನ ಸ್ಥಿತಿಗೆ ಮರಳುತ್ತಿದೆ. ಈ ಪ್ರದೇಶದಲ್ಲಿ ಭಾರೀ ಭೂಕಂಪವನ್ನು ತಡೆಯಲು ಸಾಧ್ಯವಿಲ್ಲ. ನೆಲದ ಏರಿಳಿತದಿಂದಾಗಿ ದ್ವೀಪವನ್ನು ನಗರ ಬಂದರು ಪ್ರದೇಶವನ್ನಾಗಿ ರೂಪಿಸುವುದು ಕಷ್ಟಕರ. ಆದರೆ, ಇಐಎ ವರದಿ ಗ್ರೇಟ್ ನಿಕೋಬಾರ್ ಸುತ್ತಮುತ್ತಲಿನ ಫಲಕಗಳ ಅಸ್ಥಿರತೆಯನ್ನು ಗಮನಿಸಿಯೇ ಇಲ್ಲ.

ಇದು ಹುಲಿ ಯೋಜನೆ-ಚಿಪ್ಕೋ ಆಂದೋಲನದ 50ನೇ ವರ್ಷ ಹಾಗೂ ಮೌನ ಕಣಿವೆ ಯೋಜನೆ ಸ್ಥಗಿತಗೊಂಡ 40ನೇ ವರ್ಷ. ಇಂಥ ಸುಸಮಯದಲ್ಲಿ ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಕೊಳ್ಳಿಯಿಡಲು ಸರಕಾರ ಮುಂದಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ವಾರ್ಷಿಕ 5 ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ ಎಂದು ಸರಕಾರ ಅಂದಾಜಿಸಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರ ವ್ಯವಸ್ಥೆಯ ಹಾಳುಗೆಡವುವಿಕೆ ಸಮರ್ಥನೀಯವಲ್ಲ. ಇದೊಂದು ಪರಿಸರ ಆತ್ಮಹತ್ಯಾ ಯೋಜನೆ. ಇದನ್ನು ತಡೆಯಬೇಕಿದೆ.