×
Ad

ಟಿಕೆಟ್ ನಿರಾಕರಣೆ: ಬಿಜೆಪಿ ನಾಯಕ ಈಶ್ವರಪ್ಪಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ

Update: 2023-04-21 13:04 IST

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಟ್ಟಿರುವ ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಶುಕ್ರವಾರ ಮೊಬೈಲ್ ಕರೆ ಮಾಡಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

"ನಿಮ್ಮಂತಹ ನಾಯಕರು ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಕರೆ ಮಾಡಿರುವುದು ತುಂಬಾ ಸಂತೋಷ ತಂದಿದೆ" ಎಂದು ಈಶ್ವರಪ್ಪ ಅವರು ಪ್ರಧಾನಿಯವರಿಗೆ ಹೇಳುತ್ತಿರುವುದನ್ನು ಈಶ್ವರಪ್ಪ ಹಂಚಿಕೊಂಡಿರುವ ವೀಡಿಯೊದಲ್ಲಿ ಕೇಳಿಬಂದಿದೆ.

ಶಿವಮೊಗ್ಗ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಮಾಜಿ ಸಚಿವ ಈಶ್ವರಪ್ಪ ಅವರು ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು, ಆದರೆ ಬಿಜೆಪಿ ನಾಯಕತ್ವವು ಅವರ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಈಶ್ವರಪ್ಪ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡು  ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.

ಟಿಕೆಟ್ ನಿರಾಕರಿಸಿದ ನಂತರ  ಪಕ್ಷದ ನಿರ್ದೇಶನವನ್ನು ಪಾಲಿಸುತ್ತೇನೆ ಹಾಗೂ  ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದರು.

ಪಕ್ಷಕ್ಕೆ ಈಶ್ವರಪ್ಪ ಅವರ ಬದ್ಧತೆ ಹಾಗೂ  ನಿಷ್ಠೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು ಹಾಗೂ  ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಕೊಂಡಾಡಿದರು.

ತಮ್ಮ  ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಹಾಗೂ ಕರ್ನಾಟಕದಲ್ಲಿ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುವುದನ್ನು ಖಚಿತ ಪಡಿಸಿಕೊಳ್ಳುವಂತೆ ಪ್ರಧಾನಿ  ಅವರು ಈಶ್ವರಪ್ಪರನ್ನು ಕೇಳಿಕೊಂಡರು ಎಂದು ವರದಿಯಾಗಿದೆ.

Similar News