×
Ad

ಟ್ವಿಟರ್ ಖಾತೆ ನಿರ್ಬಂಧ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2023-04-21 21:21 IST

ಬೆಂಗಳೂರು, ಎ.21: ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಗೆ ವಿರುದ್ಧವಾಗಿರುವ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಬೇಕು ಎಂಬ ನೋಟಿಸ್‍ಗಳನ್ನು ಪ್ರಶ್ನಿಸಿ ಟ್ವಿಟರ್ ಕಂಪೆನಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ಶುಕ್ರವಾರ ಆದೇಶ ಕಾಯ್ದಿರಿಸಿದೆ. 

ಒಟ್ಟು 1,400ಕ್ಕೂ ಹೆಚ್ಚು ಖಾತೆಗಳು ಮತ್ತು 175 ಟ್ವಿಟ್‍ಗಳ ಪೈಕಿ 39 ಯುಆರ್‍ಎಲ್‍ಗಳನ್ನು ತೆಗೆದು ಹಾಕುವಂತೆ ನಿರ್ದೇಶಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಟ್ವಿಟರ್ ಮತ್ತು ಕೇಂದ್ರ ಸರಕಾರದ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು. 

ಕೇಂದ್ರ ಸರಕಾರದ ಪರ ವಾದಿಸಿದ್ದ ವಕೀಲರು, ‘ಸುಳ್ಳು ಸುದ್ದಿ ಹಾಗೂ ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿಗಳ ಪ್ರಸರಣ ಮತ್ತು ಹಂಚಿಕೆ’ಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಟ್ವಿಟರ್ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ. ದೇಶದ ಸಮಗ್ರತೆ, ಸಾರ್ವಭೌಮತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಗಳ ಪ್ರಸರಣ ಇಂತಹ ವೇದಿಕೆಗಳಲ್ಲಿ ಹೆಚ್ಚಾಗುತ್ತಿವೆ ಎಂದು ಪೀಠಕ್ಕೆ ತಿಳಿಸಿದ್ದರು. 

ದೇಶ ವಿರೋಧಿ ಮತ್ತು ವಿದೇಶದಲ್ಲಿರುವ ಶತ್ರುಗಳು ಭಾರತ ವಿರೋಧಿ ಅಪಪ್ರಚಾರಕ್ಕೆ ಇಂತಹವುಗಳನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಿವೆ. ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕತೆಯಲ್ಲಿ ಬಿರುಕು ಮೂಡಿಸಲು ಇವನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಆರಂಭಿಕ ಹಂತದಲ್ಲೇ ಸುಳ್ಳು ಅಥವಾ ತಪ್ಪು ಮಾಹಿತಿಗಳನ್ನು ನಿಬರ್ಂಧಿಸುವುದು ಅಗತ್ಯವಾಗಿದೆ ಎಂದು ಪೀಠಕ್ಕೆ ಹೇಳಿದ್ದರು. 

ಟ್ವಿಟರ್ ಪರ ವಾದಿಸಿದ್ದ ವಕೀಲರು, ಟ್ವಿಟರ್ ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ನೂರಾರು, ಸಾವಿರಾರು ಖಾತೆಗಳನ್ನು ನಿಬರ್ಂಧಿಸುವಂತೆ ಕೇಂದ್ರ ಸರಕಾರ ನೋಟಿಸ್‍ಗಳನ್ನು ಜಾರಿ ಮಾಡಿದೆ. ಕಾನೂನಿನ ಅನ್ವಯ ನಾವು ಸರಕಾರದ ಆದೇಶವನ್ನು ಪಾಲಿಸಬೇಕಿದೆ. ಆದರೆ, ತಮ್ಮ ಟ್ವಿಟರ್ ಹ್ಯಾಂಡಲ್  ನಿಬರ್ಂಧವಾದುದ್ದಕ್ಕೆ ವ್ಯಕ್ತಿಗತವಾಗಿ ಬಳಕೆದಾರರಿಗೆ ಯಾವುದೇ ಆಶ್ರಯ ಅಥವಾ ಪರಿಹಾರ ಇರುವುದಿಲ್ಲ. ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ನಿಬರ್ಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಹೇಳಲಾಗಿರುವುದರಿಂದ ನಾವು ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. 1,400ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ನಿಬರ್ಂಧಿಸುವಂತೆ ಸರಕಾರ ಆದೇಶ ಮಾಡಿದೆ. ಇದಕ್ಕೆ ಯಾವುದೇ ಸಕಾರಣ ನೀಡಿಲ್ಲ ಎಂದು ವಾದಿಸಿದ್ದರು. 

ಅಲ್ಲದೆ, ಏತಕ್ಕಾಗಿ ನಿರ್ದಿಷ್ಟ ಬಳಕೆದಾರರ ಖಾತೆಗಳನ್ನು ನಿಬರ್ಂಧಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಕಾರಣ ನೀಡಬೇಕು. ಸದ್ಯದ ಕೇಂದ್ರ ಸರಕಾರದ ಆದೇಶ ಪಾಲಿಸಿದರೆ ಟ್ವಿಟರ್ ಉದ್ಯಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿರುವ ಒಂದು ಮಾದರಿಯನ್ನು ನ್ಯಾಯಾಲಯ ಪರಿಶೀಲಿಸಬಹುದು ಎಂದು ವಾದಿಸಿದ್ದರು. 

Similar News