3,044 ಮಂದಿಯ ಒಟ್ಟು 4,989 ನಾಮಪತ್ರಗಳು ಕ್ರಮಬದ್ಧ: ಇಲ್ಲಿದೆ ಸಂಪೂರ್ಣ ವಿವರ
ಬೆಂಗಳೂರು, ಎ. 21: ರಾಜ್ಯ ವಿಧಾನಸಭಾ ಚುನಾವಣೆ ರಣಕಣ ರಂಗೇರುತ್ತಿದ್ದು, 3,632 ಮಂದಿ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 5 ಸಾವಿರಕ್ಕೂ ಅಧಿಕ ನಾಮಪತ್ರಗಳ ಪರಿಶೀಲನೆ ನಡೆಸಿದ್ದು, ಆ ಪೈಕಿ 500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತವಾಗಿದ್ದು ಅಂತಿಮವಾಗಿ ಒಟ್ಟು 3,044 ಮಂದಿಯ ಒಟ್ಟು 4,989 ನಾಮಪತ್ರಗಳು ಕ್ರಮಬದ್ಧವಾಗಿವೆ.
ಬಿಜೆಪಿಯ-219, ಕಾಂಗ್ರೆಸ್‍ನ-218, ಜೆಡಿಎಸ್-207, ಎಎಪಿ-207, ಬಿಎಸ್ಪಿ-135, ಸಿಪಿಎಂ-4, ಪಕ್ಷೇತರರು-1,344 ಸೇರಿದಂತೆ 3,044 ಮಂದಿಯ ಒಟ್ಟು 4,989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಎ.24ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದ್ದು, ಆ ಬಳಿಕ ಸ್ಪರ್ಧಾ ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಬಗ್ಗೆ ಗೊತ್ತಾಗಲಿದೆ.
ಸ್ವತಃ ಅಭ್ಯರ್ಥಿಗಳಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಘಟಾನುಘಟಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಈಗಾಗಲೇ ಮನೆ-ಮನೆ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.
ರಾಜಕೀಯ ಪಕ್ಷಗಳ ಪರವಾಗಿ ತಾರಾ ಪ್ರಚಾರಕರೂ ಆಗಿರುವ ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಎಐಸಿಸಿ ಮುಖಂಡ ರಾಹುಲ್ ಗಾಂಧಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನಿತರರು ಪ್ರಚಾರದ ಅಖಾಡಕ್ಕಿಳಿದಿದ್ದು, ಚುನಾವಣಾ ರಣಕಣ ಮತ್ತಷ್ಟು ರಂಗೇರಲಿದ್ದು, ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಸಭೆಗಳು, ರ್ಯಾಲಿಗಳನ್ನು ನಡೆಸಲಿದ್ದು, ಬೇಸಿಗೆ ಬಿಸಿಲಿನ ಧಗೆಯ ನಡುವೆಯೇ ರಾಜ್ಯ ವಿಧಾನಸಭಾ ಚುನಾವಣಾ ಕಾವು ಏರಲಿದೆ.