ರಾಜ್ಯಾದ್ಯಂತ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
ಬೆಂಗಳೂರು: ರಾಜಧಾನಿ ಬೆಂಗಳೂರು, ಮಂಗಳೂರು, ಬೀದರ್, ಚಾಮರಾಜನಗರ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಶನಿವಾರ ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಣೆ ಮಾಡಲಾಯಿತು.
ಆಯ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂಮರು ಏಕಕಾಲಕ್ಕೆ ಎಲ್ಲರು ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು.
ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ, ದಾನ-ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು. ಚಿಕ್ಕಮಕ್ಕಳು ಕೂಡ ಭಾಗವಹಿಸಿರುವುದು ವಿಶೇಷವಾಗಿ ಕಂಡು ಬಂದಿತು.
ಬಿಳಿ ಬಣ್ಣದ ಜುಬ್ಬಾ, ಪೈಜಾಮ್, ಕುರ್ತಾ ಧರಿಸಿದ್ದ ಮುಸ್ಲಿಮರು ಎಲ್ಲೆಡೆಯಲ್ಲೂ ಶಾಂತಿ, ಸೌಹಾರ್ದದಿಂದ ಪರಸ್ಪರ ಆಲಂಗಿಸಿ ’ಈದ್ ಮುಬಾರಕ್‘ ಹೇಳಿಕೊಂಡು ಪರಸ್ಪರ ಶುಭಾಶಯ ಕೋರುವುದು ವಿಶೇಷವಾಗಿತ್ತು.
ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಕೋಲಾರ, ದಾವಣಗೆರೆ, ಕಲಬುರ್ಗಿ, ಬೆಳಗಾವಿ ಸೇರಿ ವಿವಿಧೆಡೆ ಈದ್ಗಾದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.
ಕೆಲವಡೆ ನೆತ್ತಿ ಸುಡುತ್ತಿದ್ದ ಬಿಸಿಲು ಲೆಕ್ಕಿಸದೆ ಸುಮಾರು ಒಂದು ತಾಸು ಪ್ರಾರ್ಥನೆ ಮಾಡಿದರು. ಹೆದ್ದಾರಿ ಯುದ್ದಕ್ಕೂ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದ ನೋಟವೇ ವಿಶೇಷವಾಗಿತ್ತು. ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವಾಹನಗಳು ಸಂಚರಿಸುವುದಕ್ಕೆ ಪೊಲೀಸರು ಪರ್ಯಾಯ ಮಾರ್ಗಗಳಲ್ಲಿ ವ್ಯವಸ್ಥೆ ಮಾಡಿದ್ದರು
ಜೊತೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.