ಬಿ.ಎಲ್ ಸಂತೋಷ್ ಗೆ ನಾನು ಸೋಲಬೇಕೆಂಬ ಆಸೆ: ಸಿದ್ದರಾಮಯ್ಯ
Update: 2023-04-22 19:03 IST
ಮೈಸೂರು,ಎ.22: ವರುಣಾಗೆ ಸೋಮಣ್ಣರನ್ನ ಕರೆ ತಂದು ನಿಲ್ಲಿಸಿದ್ದು ಬಿ.ಎಲ್ ಸಂತೋಷ್. ಅವರಿಗೆ ನಾನು ಸೋಲಬೇಕೆಂಬ ಆಸೆ. ಆದರೆ ದ್ವೇಷ ರಾಜಕಾರಣ ಮಾಡಿದರೆ ಜನ ಒಪ್ಪಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಶನಿವಾರ ವರುಣಾ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ , 'ಸಂತೋಷ್ ಪಕ್ಕಾ ಆರ್ ಎಸ್ ಎಸ್ ನವರು. ನಾನು ಕೋಲಾರದಲ್ಲಿ ಸ್ಪರ್ಧಿಸುತ್ತೇನೆ ಎಂದಾಗ ಅಲ್ಲಿಗೂ ಬಂದಿದ್ದರು . ಈಗ ವರುಣಾ ಕ್ಷೇತ್ರಕ್ಕೆ ಬಂದು ನನ್ನವಿರುದ್ದ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ಸೋಲಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಬಿಜೆಪಿ, ಬಿ.ಎಲ್ ಸಂತೋಷ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅದರೆ ಇವರ್ಯಾರು ವರುಣಾ ಕ್ಷೇತ್ರದ ಮತದಾರರಲ್ಲ. ನನ್ನನ್ನ ಗೆಲ್ಲಿಸುವುದು ವರುಣಾ ಕ್ಷೇತ್ರದ ಮತದಾರರು. 1 ಲಕ್ಷಗಳ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.