ವಿರಾಜಪೇಟೆ: ಅಂಗಡಿ ವರ್ತಕನ ಮೇಲೆ ಗುಂಡಿನ ದಾಳಿ
ಮಡಿಕೇರಿ ಏ.22 : ವರ್ತಕರೊಬ್ಬರ ಮೇಲೆ ಗುಂಡಿನ ದಾಳಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ವರದಿಯಾಗಿದೆ.
ವರ್ತಕ ಕೆ.ಬೋಪಣ್ಣ ಎಂಬುವವರು ಗುಂಡಿನ ದಾಳಿಯಿಂದ ಪಾರಾದವರಾಗಿದ್ದು, ಆರೋಪಿ ಎನ್.ರಂಜನ್ ಚಿಣ್ಣಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮ್ಮತ್ತಿಯ ಸಿದ್ದಾಪುರ ರಸ್ತೆಯಲ್ಲಿರುವ ರಂಜನ್ ಚಿಣ್ಣಪ್ಪ ಅವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ಕಳೆದ 8 ವರ್ಷಗಳಿಂದ ಬೋಪಣ್ಣ ಅವರು ಅಡಿಕೆ ಖರೀದಿ ವ್ಯವಹಾರ ನಡೆಸುತ್ತಿದ್ದರು. ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಲಹ ಏರ್ಪಟ್ಟು ರಂಜನ್ ಚಿಣ್ಣಪ್ಪ ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಎರಡು ಗುಂಡುಗಳು ಅಂಗಡಿಯ ಶಟರ್ ಗೆ ತಗುಲಿದ ಪರಿಣಾಮ ಬೋಪಣ್ಣ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿ ಹಾಗೂ ಸ್ಥಳದಲ್ಲೇ ಬಿದ್ದಿದ್ದ ರಿವಾಲ್ವರ್ ಅನ್ನು ವಶಕ್ಕೆ ಪಡೆದಿರುವ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳ್ಕಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಿರಾಜಪೇಟೆ ಡಿವೈಎಸ್‍ಪಿ, ವೃತ್ತ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.